*ಹಿಂದೂ ದೇವಾಲಯದಲ್ಲಿ ಭಾರತೀಯರ ಮೇಲೆ ಸಾಮೂಹಿಕ ಗುಂಡಿನ ದಾಳಿ ಸಂಚು*: *19 ವರ್ಷದ ಯುವಕ ಬಂಧನ!*

ಪ್ರಗತಿವಾಹಿನಿ ಸುದ್ದಿ: ಹಿಂದೂ ದೇವಾಲಯವೊಂದರಲ್ಲಿ ಭಾರತೀಯರನ್ನು ಗುರಿಯಾಗಿಸಿಕೊಂಡು ಸಾಮೂಹಿಕ ಗುಂಡಿನ ದಾಳಿ ನಡೆಸಲು ಸಂಚು ರೂಪಿಸಿದ ಆರೋಪದ ಮೇಲೆ 19 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ರೈಫಲ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಸಂಭವಿಸಬಹುದಾಗಿದ್ದ ಭಾರೀ ದುರಂತ ತಪ್ಪಿದೆ. ಯುವಕನ ಸಹೋದ್ಯೋಗಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಸಂಚು ಬೆಳಕಿಗೆ ಬಂದಿದೆ.
ಬಂಧಿತನನ್ನು ಇಲಿನಾಯ್ಸ್ನ ಪಾಲಟೈನ್ ನಿವಾಸಿ ಅಲೆಕ್ಸಾಂಡ್ರೋಸ್ ಪಾಪೊರಾಕಿಸ್ ಎಂದು ಗುರುತಿಸಲಾಗಿದೆ. ಈತ ಟ್ಯಾಕೋ ಬೆಲ್ ರೆಸ್ಟೋರೆಂಟ್ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದ. ಅಮೆರಿಕದ ಇಲಿನಾಯ್ಸ್ನ ಅರೋರಾ ನಗರದ ಸಮೀಪವಿರುವ ಪ್ರಮುಖ ಹಿಂದೂ ದೇವಾಲಯದಲ್ಲಿ ಭಾರತೀಯರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಯೋಜಿಸಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ.
ತನಿಖಾಧಿಕಾರಿಗಳ ಪ್ರಕಾರ, ಆರೋಪಿಯ ಬಳಿ ಮಾರ್ಪಡಿಸಲಾದ ರೈಫಲ್, ಸುಮಾರು 300 ಸುತ್ತುಗಳ ಗುಂಡುಗಳು, ದೇಹರಕ್ಷಣಾ ಕವಚ, ಪೆಟ್ರೋಲ್ ಕ್ಯಾನ್ಗಳು ಹಾಗೂ ಸ್ವಸ್ತಿಕ್ ಚಿಹ್ನೆಗಳಿದ್ದವು. ಹೆಚ್ಚಿನ ಸಂಖ್ಯೆಯ ಭಾರತೀಯರನ್ನು ಹತ್ಯೆ ಮಾಡುವ ಉದ್ದೇಶದಿಂದ ತನ್ನ ತಾಯಿಯ ಮನೆಯಿಂದ ದೇವಾಲಯಕ್ಕೆ ತೆರಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ದೇವಾಲಯಕ್ಕೆ ತೆರಳಿದ್ದ ಸಂದರ್ಭದಲ್ಲಿ ರೈಫಲ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಗುಂಡು ಹಾರಿಸಲು ಸಾಧ್ಯವಾಗಲಿಲ್ಲ. ಬಳಿಕ ಅಲ್ಲಿಂದ ತೆರಳಿದ ಆರೋಪಿ, ಶಸ್ತ್ರದಲ್ಲಿನ ದೋಷವನ್ನು ಸರಿಪಡಿಸುವ ಕುರಿತು ಆನ್ಲೈನ್ನಲ್ಲಿ ಮಾಹಿತಿ ಹುಡುಕಿದ್ದಾನೆ ಎನ್ನಲಾಗಿದೆ.
ಇದರ ಬೆನ್ನಲ್ಲೇ ಸಾಮೂಹಿಕ ಗುಂಡಿನ ದಾಳಿ ನಡೆಸುವ ತನ್ನ ಉದ್ದೇಶದ ಕುರಿತು ಸಹೋದ್ಯೋಗಿಯೊಬ್ಬರಿಗೆ ಕರೆ ಮಾಡಿ ತಿಳಿಸಿದ್ದಾನೆ ಎಂದು ತನಿಖೆಯಲ್ಲಿ ಗೊತ್ತಾಗಿದೆ. ಈ ಮಾಹಿತಿ ಪಡೆದ ಸಹೋದ್ಯೋಗಿ ಪೊಲೀಸರಿಗೆ ದೂರು ನೀಡಿದ್ದು, ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಸಹೋದ್ಯೋಗಿಯಿಂದ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಅಕ್ಟೋಬರ್ 11ರಂದು ಪಾಪೊರಾಕಿಸ್ನನ್ನು ಬಂಧಿಸಲಾಗಿದೆ. ಆರೋಪಿಯ ಉದ್ದೇಶ, ದಾಳಿಯ ಸಿದ್ಧತೆ ಮತ್ತು ಸಂಚಿನಲ್ಲಿ ಇತರರ ಪಾತ್ರವಿದೆಯೇ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



