*ಶಾಲಾ ಮೇಲ್ಛಾವಣಿ ಕುಸಿದು ಭೀಕರ ದುರಂತ*: *21 ಮಕ್ಕಳು, ಶಿಕ್ಷಕಿ ಸಾವು!*

ಪ್ರಗತಿವಾಹಿನಿ ಸುದ್ದಿ: ಶಾಲೆಯ ಮೇಲ್ಛಾವಣಿ ಕುಸಿದು 21 ಮಕ್ಕಳು ಸೇರಿದಂತೆ ಒಟ್ಟು 22 ಮಂದಿ ಮೃತಪಟ್ಟಿರುವ ದಾರುಣ ಘಟನೆ ಸಂಭವಿಸಿದೆ. ಮಕ್ಕಳು ತರಗತಿಗೆ ಆಗಮಿಸುತ್ತಿದ್ದ ವೇಳೆ ಏಕಾಏಕಿ ಛಾವಣಿ ಕುಸಿದಿದ್ದು, ಘಟನೆಯಿಂದ ಶಾಲಾ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ದುರಂತದಲ್ಲಿ ಓರ್ವ ಶಿಕ್ಷಕಿಯೂ ಮೃತಪಟ್ಟಿದ್ದಾರೆ.
ಪಾಕಿಸ್ತಾನದ ಪೇಶಾವರದ ಆಫ್ರಿದಿ ಅಬಾದ್ ಪ್ರದೇಶದ ಅಲ್ ಖೈರ್ ಶಾಲೆಯಲ್ಲಿ ಮೇಲ್ಛಾವಣಿ ಕುಸಿದ ರಭಸಕ್ಕೆ ಮಕ್ಕಳು ಅವಶೇಷಗಳಡಿ ಸಿಲುಕಿದ್ದಾರೆ. ಮೃತ ಮಕ್ಕಳಲ್ಲಿ 7ರಿಂದ 12 ವರ್ಷದೊಳಗಿನ ಮಕ್ಕಳು ಸೇರಿದ್ದಾರೆ. ಘಟನೆಯಲ್ಲಿ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಐವರ ಸ್ಥಿತಿ ಗಂಭೀರವಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ದುರಂತದ ಮಾಹಿತಿ ಸಿಗುತ್ತಿದ್ದಂತೆ ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿವೆ. ಅವಶೇಷಗಳಡಿ ಸಿಲುಕಿರುವವರನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶಾಲೆಯ ಮೇಲ್ಛಾವಣಿ ಏಕಾಏಕಿ ಕುಸಿಯಲು ನಿಖರ ಕಾರಣವೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಅವಶೇಷಗಳಡಿ ಯಾರಾದರೂ ಸಿಲುಕಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಲು ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




