*ಬೆಳಗಾವಿಯಲ್ಲಿ ರಾಷ್ಟ್ರಮಟ್ಟದ ಮ್ಯಾರಥಾನ್ಗೆ ಸಿದ್ಧತೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕ್ರೀಡಾಸಕ್ತರನ್ನು ಉತ್ತೇಜಿಸುವ ಉದ್ದೇಶದಿಂದ ರಾಜ್ಯ ಸರ್ಕಾರದ ‘ಸಶಕ್ತ ಕರ್ನಾಟಕ’ ಕಾರ್ಯಕ್ರಮದಡಿ ಬೆಳಗಾವಿಯಲ್ಲಿ ಅಕ್ಟೋಬರ್ 25ರಂದು ರಾಷ್ಟ್ರಮಟ್ಟದ ಮ್ಯಾರಥಾನ್ ಆಯೋಜಿಸಲಾಗಿದೆ.
5, 10 ಹಾಗೂ 21 ಕಿಲೋಮೀಟರ್ ವಿಭಾಗಗಳಲ್ಲಿ ನಡೆಯಲಿರುವ ಈ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಪಾಲ್ಗೊಳ್ಳುವಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮನವಿ ಮಾಡಿದ್ದಾರೆ.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮ್ಯಾರಥಾನ್ ಆಯೋಜನೆ ಕುರಿತು ಮಾಹಿತಿ ನೀಡಿದ ಅವರು, ಬೆಳಗಾವಿ ಸೇರಿದಂತೆ ಹಂಪಿ, ಮುರಡೇಶ್ವರ ಹಾಗೂ ಚಿತ್ರದುರ್ಗದಲ್ಲಿ ರಾಷ್ಟ್ರಮಟ್ಟದ ಮ್ಯಾರಥಾನ್ಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ, ಬೆಂಗಳೂರಿನ ಜೆ.ಜೆ. ಆಕ್ಟಿವ್ ಸಂಸ್ಥೆಯ ಸಹಭಾಗಿತ್ವದಲ್ಲಿ ಈ ಸ್ಪರ್ಧೆ ನಡೆಯಲಿದೆ.
ಮ್ಯಾರಥಾನ್ನ ಮೂರು ವಿಭಾಗಗಳ ಓಟವು ಬೆಳಗಾವಿಯ ಸುವರ್ಣಸೌಧದಿಂದ ಆರಂಭವಾಗಲಿದೆ. ನಗರದ ಕೋಟೆ ಕೆರೆ ಮಾರ್ಗವಾಗಿ ಸಾಗುವ ಸ್ಪರ್ಧೆ ಮತ್ತೆ ಸುವರ್ಣಸೌಧದ ಮುಂಭಾಗದಲ್ಲಿ ಮುಕ್ತಾಯಗೊಳ್ಳಲಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲರಿಗೂ ಟಿ-ಶರ್ಟ್, ಪದಕ ಹಾಗೂ ಲಘು ಉಪಾಹಾರದ ವ್ಯವಸ್ಥೆ ಮಾಡಲಾಗಿದೆ.
ವಿಜೇತರಿಗೆ ಆಕರ್ಷಕ ನಗದು ಬಹುಮಾನ
21 ಕಿ.ಮೀ ಹಾಫ್ ಮ್ಯಾರಥಾನ್ನಲ್ಲಿ 18ರಿಂದ 45 ವರ್ಷದೊಳಗಿನ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಬಹುಮಾನ ನೀಡಲಾಗುತ್ತದೆ. ಪ್ರಥಮ ಸ್ಥಾನಕ್ಕೆ ₹7,500, ದ್ವಿತೀಯ ಸ್ಥಾನಕ್ಕೆ ₹5,000 ಹಾಗೂ ತೃತೀಯ ಸ್ಥಾನಕ್ಕೆ ₹3,000 ನಗದು ಬಹುಮಾನದ ಜೊತೆಗೆ ಟ್ರೋಫಿ ವಿತರಿಸಲಾಗುತ್ತದೆ.
45 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಪ್ರಥಮ ಬಹುಮಾನ ₹5,000, ದ್ವಿತೀಯ ಬಹುಮಾನ ₹3,500 ಹಾಗೂ ತೃತೀಯ ಬಹುಮಾನ ₹2,500 ನಿಗದಿಪಡಿಸಲಾಗಿದೆ. ಈ ವಿಭಾಗದಲ್ಲಿಯೂ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಬಹುಮಾನ ನೀಡಲಾಗುತ್ತದೆ.
10 ಕಿ.ಮೀ ಓಟದ 18ರಿಂದ 45 ವರ್ಷದೊಳಗಿನ ವಿಭಾಗದಲ್ಲಿ ಕ್ರಮವಾಗಿ ₹5,000, ₹3,500 ಹಾಗೂ ₹2,500 ಬಹುಮಾನ ನೀಡಲಾಗುತ್ತದೆ. 45 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಪ್ರಥಮ ಸ್ಥಾನಕ್ಕೆ ₹3,000, ದ್ವಿತೀಯ ಸ್ಥಾನಕ್ಕೆ ₹2,000 ಹಾಗೂ ತೃತೀಯ ಸ್ಥಾನಕ್ಕೆ ₹1,500 ನಗದು ಬಹುಮಾನದೊಂದಿಗೆ ಟ್ರೋಫಿ ನೀಡಲಾಗುತ್ತದೆ.
ಆನ್ಲೈನ್ ನೋಂದಣಿ ಕಡ್ಡಾಯ
ಮ್ಯಾರಥಾನ್ನಲ್ಲಿ ಪಾಲ್ಗೊಳ್ಳಲು ಆಸಕ್ತರು https://raceiq.in/belagavirun ವೆಬ್ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು. 5 ಕಿ.ಮೀ ಓಟಕ್ಕೆ ₹350, 10 ಕಿ.ಮೀ ಓಟಕ್ಕೆ ₹600 ಹಾಗೂ 21 ಕಿ.ಮೀ ಹಾಫ್ ಮ್ಯಾರಥಾನ್ಗೆ ₹800 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ವಿದ್ಯಾರ್ಥಿಗಳು ಮತ್ತು ಹಿರಿಯ ನಾಗರಿಕರಿಗೆ ಪ್ರವೇಶ ಶುಲ್ಕದಲ್ಲಿ ಶೇ.25ರಷ್ಟು ರಿಯಾಯಿತಿ ನೀಡಲಾಗುತ್ತದೆ.
ಸ್ಥಳೀಯ ಕ್ರೀಡಾಪಟುಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಬೆಳಗಾವಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಮ್ಯಾರಥಾನ್ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಕರೆ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




