Kannada NewsLatestNational

*75ರ ವೃದ್ಧನ ಮದುವೆಯಾಗಲು ಸಜ್ಜಾದ 30ರ ಯುವತಿ*

ಪ್ರಗತಿವಾಹಿನಿ ಸುದ್ದಿ: ಪ್ರೀತಿ ಕುರುಡು ಎಂಬ ಮಾತಿದೆ. ಇಲ್ಲೊಂದು ಘಟನೆಯಲ್ಲಿ ಅದು ನಿಜವೆನಿಸುತ್ತದೆ. 30 ವರ್ಷದ ಯುವತಿಯೊಬ್ಬಳು 75ರ ವೃದ್ಧನ ಕೈಹಿಡಿಯಲು ಸಜ್ಜಾಗಿರುವ ಘಟನೆ ಬೆಳಕಿಗೆ ಬಂದಿದೆ. ಇಬ್ಬರ ನಿಶ್ಚಿತಾರ್ಥ ಕೂಡ ಅದ್ಧೂರಿಯಾಗಿ ನೆರವೇರಿದೆ.

ಪ್ರೀತಿಗೆ ಜಾತಿ, ಮತ ಮತ್ತು ವಯಸ್ಸಿನ ಹಂಗಿಲ್ಲ ಎಂಬ ಮಾತನ್ನು ಉತ್ತರ ಪ್ರದೇಶದ ಈ ಅಪರೂಪದ ಜೋಡಿ ನಿಜವಾಗಿಸಿದೆ. 30 ವರ್ಷದ ಸೋಷಿಯಲ್ ಮೀಡಿಯಾ ಬ್ಲಾಗರ್ 75 ವರ್ಷದ ವೃದ್ಧನ ಪ್ರೇಮದ ಬಲೆಯಲ್ಲಿ ಬಿದ್ದಿದ್ದಾಳೆ.

ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. 30 ವರ್ಷದ ಸೋಷಿಯಲ್ ಮೀಡಿಯಾ ಬ್ಲಾಗರ್ ರೀನಾ, 75 ವರ್ಷದ ರಾಮ್ ಸಾಗರ್ ಎಂಬ ವೃದ್ಧನನ್ನು ಪ್ರೀತಿಸಿ ಮದುವೆಯಾಗಲು ಸಿದ್ಧತೆ ನಡೆದಿದ್ದಾರೆ.

ಬರೋಬ್ಬರಿ 45 ವರ್ಷಗಳ ವಯಸ್ಸಿನ ಅಂತರವಿರುವ ಈ ಜೋಡಿಯ ನಿಶ್ಚಿತಾರ್ಥವು ಈಗಾಗಲೇ ನೆರವೇರಿದೆ. ಇವರ ಎಂಗೇಜ್‌ಮೆಂಟ್‌ನ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಇಡೀ ಇಂಟರ್ನೆಟ್ ಜಗತ್ತೇ ಇದೆಂಥಾ ಪ್ರೀತಿ ಎಂದು ಅಚ್ಚರಿ ಪಟ್ಟಿದೆ.

ತಮ್ಮ ಪ್ರೇಮ ಹಾಗೂ ಮದುವೆ ವಿಚಾರವಾಗಿ ಮಾತನಾಡಿರುವ ರೀನಾ, “ನಮ್ಮ ನಡುವಿನ ವಯಸ್ಸಿನ ಅಂತರ ನನಗೆ ಎಂದಿಗೂ ತೊಂದರೆ ಅನಿಸಿಲ್ಲ. ನಾನು ರಾಮ್ ಸಾಗರ್ ಅವರೊಂದಿಗೆ ತುಂಬಾ ಸಂತೋಷವಾಗಿದ್ದೇನೆ. ಅವರೇ ನನ್ನ ಬಾಳಿನ ಸಂಗಾತಿ. ಈ ನಿರ್ಧಾರದಿಂದ ನಾನು ಅತ್ಯಂತ ಖುಷಿಯಾಗಿದ್ದೇನೆ” ಎಂದು ಹೇಳಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಜೋಡಿಯ ಬಗ್ಗೆ ಪರ – ವಿರೋಧ ಚರ್ಚೆಗಳು ನಡೆಯುತ್ತಿವೆ. ಕೆಲವರು ಇದನ್ನು ಟೀಕಿಸಿದರೆ, ಇನ್ನು ಕೆಲವರು ‘ಮನಸ್ಸುಗಳು ಒಂದಾದ ಮೇಲೆ ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ’ ಎಂದು ಬೆಂಬಲಿಸುತ್ತಿದ್ದಾರೆ. ಆದರೆ ಇದ್ಯಾವುದಕ್ಕೂ ಕಿವಿಗೊಡದ ರೀನಾ-ರಾಮ್ ಸಾಗರ್ ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button