Belagavi NewsBelgaum NewsKannada NewsKarnataka NewsPolitics

*ಪ್ರಹ್ಲಾದ್ ಜೋಶಿ ಅಣಕು ಶವಯಾತ್ರೆ ನಡೆಸಿದ ರೈತರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವಂತೆ ಒತ್ತಾಯಿಸಿ ಬೀದಿಗಿಳಿದಿರುವ ರೈತರು, ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಹೋರಾಟದ ಭಾಗವಾಗಿ ಬೆಳಗಾವಿ ತಾಲೂಕಿನ ಕೆಕೆ ಕೊಪ್ಪ ಕ್ರಾಸ್ ಬಳಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಅಣಕು ಶವಯಾತ್ರೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.

ಪೂನಾ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿ ಜಮಾಯಿಸಿದ ರೈತರು, ಪ್ರಹ್ಲಾದ್ ಜೋಶಿ ಅವರ ಭಾವಚಿತ್ರವಿಟ್ಟು ಅಣಕು ಶವಯಾತ್ರೆ ನಡೆಸಿದರು. ಅಲ್ಲದೆ, ಸಚಿವರು ಐಸಿಯುನಲ್ಲಿರುವಂತೆ ಚಿತ್ರಿಸಲಾದ ಫೋಟೋ ಪ್ರದರ್ಶಿಸುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಕಬ್ಬು ಬೆಳೆಗಾರರ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ ಪ್ರತಿಭಟನಾಕಾರರು, ಸಂಸದ ಜಗದೀಶ್ ಶೆಟ್ಟರ್ ಅವರ ವಿರುದ್ಧವೂ ಘೋಷಣೆಗಳನ್ನು ಕೂಗಿದರು. ಕಬ್ಬಿಗೆ ಸೂಕ್ತ ದರ ನಿಗದಿಪಡಿಸುವುದರ ಜತೆಗೆ ರೈತರ ವಿವಿಧ ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕು ಎಂದು ಆಗ್ರಹಿಸಿದರು.

ಕಬ್ಬಿನ ಬೆಲೆ ವಿಚಾರವಾಗಿ ಆರಂಭಗೊಂಡಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಪಾದಯಾತ್ರೆಯ ನಡುವೆಯೇ ಹೆದ್ದಾರಿಯಲ್ಲಿ ನಡೆದ ಈ ಪ್ರತಿಭಟನೆ ಗಮನ ಸೆಳೆದಿದೆ. ರೈತರ ಬೇಡಿಕೆಗಳಿಗೆ ಸರ್ಕಾರ ಯಾವ ರೀತಿ ಸ್ಪಂದಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button