CrimeKannada NewsKarnataka NewsLatest

*ಏರ್‌ಪೋರ್ಟ್‌ನಲ್ಲೇ ಭಿಕ್ಷಾಟನೆ ಕಾಟ*: *ಎರಡು ದಿನದಲ್ಲಿ ಇಬ್ಬರು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಬಳಿ ಹಣ ಕೇಳಿ ಭಿಕ್ಷಾಟನೆ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ವಿಶೇಷವೆಂದರೆ, ಬಂಧಿತ ಪ್ರತೀಕ್ ಭಾಟಿಯಾ ಈ ಹಿಂದೆಯೂ ಇದೇ ಕೃತ್ಯ ಎಸಗಿ ಸಿಕ್ಕಿಬಿದ್ದಿದ್ದ. ಮತ್ತೊಬ್ಬ ವ್ಯಕ್ತಿ ಧಾರ್ಮಿಕ ಉಡುಪು ಧರಿಸಿ, ಮುಖಕ್ಕೆ ಮಾಸ್ಕ್ ಹಾಕಿಕೊಂಡು ಹಣ ಕೇಳುತ್ತಿದ್ದಾಗ ಭದ್ರತಾ ಸಿಬ್ಬಂದಿಯ ಕೈಗೆ ಸಿಕ್ಕಿಬಿದ್ದಿದ್ದಾನೆ.

ಕೇವಲ ಎರಡು ದಿನಗಳ ಅಂತರದಲ್ಲಿ ಈ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಒಳಬರುವ ಪ್ರಯಾಣಿಕರ ಬಳಿ ಹಣ ಕೇಳುತ್ತಿದ್ದ ಪ್ರತೀಕ್ ಭಾಟಿಯಾ ಪೊಲೀಸರ ವಶವಾಗಿದ್ದಾನೆ. ಈ ಹಿಂದೆ ಟರ್ಮಿನಲ್ 2ರಲ್ಲೂ ಇದೇ ರೀತಿ ಭಿಕ್ಷಾಟನೆ ಮಾಡಿ ಬಂಧನಕ್ಕೊಳಗಾಗಿದ್ದ ಪ್ರತೀಕ್, ಮತ್ತೆ ಅದೇ ಕೃತ್ಯದಲ್ಲಿ ತೊಡಗಿದ್ದಾಗ ಸಿಕ್ಕಿಬಿದ್ದಿದ್ದಾನೆ. ಈ ಘಟನೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಅಕ್ಟೋಬರ್ 15ರಂದು ವಿಮಾನ ನಿಲ್ದಾಣದ ಲ್ಯಾಂಡ್‌ಸೈಡ್ ಭದ್ರತಾ ಸಿಬ್ಬಂದಿ ಮತ್ತೊಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ವೆಂಕಟ ದಿನೇಶ್ ಕುಮಾರ್ ಎಂಬಾತ ಧಾರ್ಮಿಕ ಉಡುಪು ಧರಿಸಿ, ಮುಖಕ್ಕೆ ಮಾಸ್ಕ್ ಹಾಕಿಕೊಂಡು ಟರ್ಮಿನಲ್ 2ರ ನಿರ್ಗಮನ ಪ್ರದೇಶದಲ್ಲಿ ಪ್ರಯಾಣಿಕರ ಬಳಿ ಹಣ ಕೇಳುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಈತನೂ ಪುನರಾವರ್ತಿತ ಅಪರಾಧಿ ಎಂದು ತಿಳಿದುಬಂದಿದೆ.

ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುವುದು ಮತ್ತು ವಿಮಾನ ನಿಲ್ದಾಣದ ಭದ್ರತಾ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ಇಬ್ಬರನ್ನೂ ಹೆಚ್ಚಿನ ತನಿಖೆ ಹಾಗೂ ಮುಂದಿನ ಕಾನೂನು ಕ್ರಮಕ್ಕಾಗಿ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button