Latest

*SSLC, PUC ಪರೀಕ್ಷಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ*: *ಇನ್ಮುಂದೆ ಮೂರು ಪರೀಕ್ಷೆಗಳ ಬದಲು ಎರಡೇ ಪರೀಕ್ಷೆ!*

ಪ್ರಗತಿವಾಹಿನಿ ಸುದ್ದಿ: ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಮಹತ್ವದ ಬದಲಾವಣೆಗೆ ಮುಂದಾಗಿದೆ. ಕಳೆದ ಎರಡು ವರ್ಷಗಳಿಂದ ನಡೆಯುತ್ತಿದ್ದ ಮೂರು ಮುಖ್ಯ ಪರೀಕ್ಷೆಗಳ ವ್ಯವಸ್ಥೆಗೆ ಬದಲಾಗಿ, ಈ ವರ್ಷದಿಂದ ಎರಡು ಮುಖ್ಯ ಪರೀಕ್ಷೆಗಳನ್ನು ಮಾತ್ರ ನಡೆಸಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ. ಕಳೆದ ವರ್ಷ ದಾಖಲೆಯ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದ್ದು, ವಿದ್ಯಾರ್ಥಿಗಳು ಹೊಸ ಪರೀಕ್ಷಾ ವ್ಯವಸ್ಥೆಗೆ ತಕ್ಕಂತೆ ಸಿದ್ಧತೆ ಮಾಡಿಕೊಳ್ಳಬೇಕಿದೆ.

ಮೂರು ಮುಖ್ಯ ಪರೀಕ್ಷೆಗಳ ಮೂಲಕ ವಿದ್ಯಾರ್ಥಿಗಳಿಗೆ ಅಂಕಗಳನ್ನು ಸುಧಾರಿಸಿಕೊಳ್ಳಲು ಅವಕಾಶ ನೀಡಲಾಗುತ್ತಿತ್ತು. ಆದರೆ, ಈ ವರ್ಷದಿಂದ ಪರೀಕ್ಷೆಗಳ ಸಂಖ್ಯೆಯನ್ನು ಎರಡಕ್ಕೆ ಸೀಮಿತಗೊಳಿಸುವ ಉದ್ದೇಶ ಶಿಕ್ಷಣ ಇಲಾಖೆಗೆ ಇದೆ. ಹೀಗಾಗಿ ವಿದ್ಯಾರ್ಥಿಗಳು ಪರೀಕ್ಷಾ ಸಿದ್ಧತೆಯನ್ನು ಮೊದಲಿನಿಂದಲೇ ಯೋಜಿಸಿಕೊಂಡು, ಪಾಠಗಳ ಪುನರಾವರ್ತನೆ ಮತ್ತು ಮಾದರಿ ಪ್ರಶ್ನೆಪತ್ರಿಕೆಗಳ ಅಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಹೊಸ ವ್ಯವಸ್ಥೆಗೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವಂತೆ ಶಿಕ್ಷಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ.

ಇದೇ ವೇಳೆ, 2027ರ ದ್ವಿತೀಯ ಪಿಯುಸಿ ಪರೀಕ್ಷೆ–1ರ ತಾತ್ಕಾಲಿಕ ವೇಳಾಪಟ್ಟಿ ಪ್ರಕಟವಾಗಿದೆ. ಫೆಬ್ರವರಿ 27ರಂದು ಕನ್ನಡ ಮತ್ತು ಅರೇಬಿಕ್ ಪರೀಕ್ಷೆಗಳೊಂದಿಗೆ ಪರೀಕ್ಷೆ ಆರಂಭವಾಗಲಿದ್ದು, ಮಾರ್ಚ್ 17ರಂದು ಹಿಂದಿ ಪರೀಕ್ಷೆಯೊಂದಿಗೆ ಮುಕ್ತಾಯವಾಗಲಿದೆ. ಪರೀಕ್ಷೆಗಳು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ನಡೆಯಲಿವೆ ಎಂದು ತಾತ್ಕಾಲಿಕ ವೇಳಾಪಟ್ಟಿಯಲ್ಲಿ ತಿಳಿಸಲಾಗಿದೆ.

ಫೆಬ್ರವರಿ 27ರಂದು ಕನ್ನಡ ಮತ್ತು ಅರೇಬಿಕ್, ಮಾರ್ಚ್ 1ರಂದು ಇಂಗ್ಲಿಷ್ ಹಾಗೂ ಮಾರ್ಚ್ 2ರಂದು ಪ್ರಾದೇಶಿಕ ಭಾಷೆಗಳ ಪರೀಕ್ಷೆ ನಡೆಯಲಿದೆ. ಮಾರ್ಚ್ 3ರಂದು ಭೂಗೋಳಶಾಸ್ತ್ರ ಮತ್ತು ಮನಃಶಾಸ್ತ್ರ, ಮಾರ್ಚ್ 4ರಂದು ಸಮಾಜಶಾಸ್ತ್ರ ಮತ್ತು ಭೌತಶಾಸ್ತ್ರ, ಮಾರ್ಚ್ 5ರಂದು ಲೆಕ್ಕಶಾಸ್ತ್ರ ಪರೀಕ್ಷೆ ನಿಗದಿಯಾಗಿದೆ.

ಮಾರ್ಚ್ 6ರಂದು ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಪರೀಕ್ಷೆ ಇರುವುದಿಲ್ಲ. ಮಾರ್ಚ್ 8ರಂದು ರಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ ಮತ್ತು ಮೂಲ ಗಣಿತ, ಮಾರ್ಚ್ 9ರಂದು ಅರ್ಥಶಾಸ್ತ್ರ ಮತ್ತು ಭೂಗರ್ಭಶಾಸ್ತ್ರ ಪರೀಕ್ಷೆಗಳು ನಡೆಯಲಿವೆ. ಮಾರ್ಚ್ 10ರಂದು ರಂಜಾನ್ ಹಿನ್ನೆಲೆಯಲ್ಲಿ ಪರೀಕ್ಷೆ ಇರುವುದಿಲ್ಲ.

ಮಾರ್ಚ್ 11ರಂದು ಹಿಂದೂಸ್ತಾನಿ ಸಂಗೀತ ಮತ್ತು ವೃತ್ತಿಪರ ವಿಷಯಗಳು, ಮಾರ್ಚ್ 12ರಂದು ವ್ಯವಹಾರ ಅಧ್ಯಯನ ಮತ್ತು ಗಣಿತ, ಮಾರ್ಚ್ 13ರಂದು ಐಚ್ಛಿಕ ಕನ್ನಡ, ತರ್ಕಶಾಸ್ತ್ರ ಮತ್ತು ಗೃಹವಿಜ್ಞಾನ ಪರೀಕ್ಷೆಗಳು ನಡೆಯಲಿವೆ. ಮಾರ್ಚ್ 15ರಂದು ರಾಜ್ಯಶಾಸ್ತ್ರ, ಜೀವಶಾಸ್ತ್ರ ಮತ್ತು ಗಣಕಶಾಸ್ತ್ರ, ಮಾರ್ಚ್ 16ರಂದು ಇತಿಹಾಸ, ಸಂಖ್ಯಾಶಾಸ್ತ್ರ ಮತ್ತು ವಿದ್ಯುನ್ಮಾನಶಾಸ್ತ್ರ ಪರೀಕ್ಷೆಗಳು ನಿಗದಿಯಾಗಿವೆ. ಕೊನೆಯದಾಗಿ ಮಾರ್ಚ್ 17ರಂದು ಹಿಂದಿ ಪರೀಕ್ಷೆ ನಡೆಯಲಿದೆ.

ವಿದ್ಯಾರ್ಥಿಗಳು ತಾತ್ಕಾಲಿಕ ವೇಳಾಪಟ್ಟಿಯನ್ನು ಆಧರಿಸಿ ಓದಿನ ಯೋಜನೆ ರೂಪಿಸಿಕೊಳ್ಳಬೇಕು. ಅಂತಿಮ ವೇಳಾಪಟ್ಟಿಯಲ್ಲಿ ಬದಲಾವಣೆಗಳಿದ್ದರೆ ಶಿಕ್ಷಣ ಇಲಾಖೆ ಪ್ರಕಟಿಸುವ ಅಧಿಕೃತ ಮಾಹಿತಿಯನ್ನೇ ಅನುಸರಿಸಬೇಕು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button