Belagavi NewsBelgaum NewsKannada NewsKarnataka NewsNational

*ಕಚೇರಿ ಅವಧಿಯಲ್ಲಿ ಢಾಬಾದಲ್ಲಿ ಕುಳಿತು ಮದ್ಯ ಸೇವಿಸಿದ ಖಾನಾಪುರ ತಹಸೀಲ್ದಾರ್ ವಿರುದ್ಧ ಕ್ರಮಕ್ಕೆ ಆಗ್ರಹ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸರ್ಕಾರಿ ಕೆಲಸದ ದಿನದಂದು ಕಚೇರಿ ಅವಧಿಯಲ್ಲಿ ಖಾನಾಪುರ ತಹಸೀಲ್ದಾರ್ ದುಂಡಪ್ಪ ಕೋಮಾರ ಹಾಗೂ ಇತರೆ ಅಧಿಕಾರಿಗಳು ತಾಲ್ಲೂಕಿನ ಜಾಂಬೋಟಿ ಬಳಿ ಬೆಳಗಾವಿ-ಚೋರ್ಲಾ ರಾಜ್ಯ ಹೆದ್ದಾರಿ ಮೇಲಿನ ಸಂಗೀತಾ ಢಾಬಾ ಹೋಟೆಲ್ ನಲ್ಲಿ ಕುಳಿತು ಮದ್ಯ ಸೇವಿಸಿದ್ದಾರೆ. ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು, ಅಧಿಕಾರಿಗಳಿಗೆ ಮದ್ಯ ಸರಬರಾಜು ಮಾಡಿದ ಮತ್ತು ಮದ್ಯ ಸೇವಿಸಲು ಅನುವು ಮಾಡಿಕೊಟ್ಟ ಜಾಂಬೋಟಿ ಬಳಿಯ ಸಂಗೀತಾ ಢಾಬಾ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ತಾಲ್ಲೂಕಿನ ದೇವಾಚಿಹಟ್ಟಿ ನಿವಾಸಿ ವಿಲಾಸ ಕವಟಣಕರ ಆಗ್ರಹಿಸಿದರು.

ಭಾನುವಾರ ಪಟ್ಟಣದ ಲೋಕೋಪಯೋಗಿ ಇಲಾಖೆಯ ವಿಶ್ರಾಂತಿಗೃಹದಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, “ಕೆಲ ದಿನಗಳ ಹಿಂದೆ ಕಾರ್ಯನಿಮಿತ್ತ ತಾವು ತಮ್ಮ ಮಿತ್ರ ಸಾಗರ ಕೋಳೆಕರ ಅವರೊಂದಿಗೆ ಕಣಕುಂಬಿ ಹೋಗಿದ್ದು, ಮರಳಿ ಜಾಂಬೋಟಿಗೆ ಬರುವ ಸಂದರ್ಭದಲ್ಲಿ ಮಧ್ಯಾಹ್ನದ ಊಟಕ್ಕಾಗಿ ಸಂಗೀತಾ ಢಾಬಾಗೆ ಹೋದಾಗ ಢಾಬಾದಲ್ಲಿ ತಹಸೀಲ್ದಾರ್ ದುಂಡಪ್ಪ ಅವರೊಂದಿಗೆ ಗ್ರೇಡ್-2 ತಹಸೀಲ್ದಾರ್ ಎಸ್.ಕೆ ತಂಗೊಳ್ಳಿ, ಕಂದಾಯ ನಿರೀಕ್ಷಕ ರಮೇಶ ಕೋಲಕಾರ ಮದ್ಯ ಸೇವನೆಯಲ್ಲಿ ತೊಡಗಿದ್ದರು. ಜವಾಬ್ದಾರಿಯುತ ಸ್ಥಾನದಲ್ಲಿರುವ ತಾಲ್ಲೂಕು ದಂಡಾಧಿಕಾರಿಗಳು ಸರ್ಕಾರಿ ಕೆಲಸದ ದಿನದಂದು ಕಚೇರಿ ವೇಳೆಯಲ್ಲಿ ತಮ್ಮ ಸರ್ಕಾರಿ ವಾಹನವನ್ನು ಢಾಭಾದ ಮುಂದೆ ನಿಲ್ಲಿಸಿ ತಮ್ಮ ಅಧೀನ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಮದ್ಯ ಸೇವನೆಯಲ್ಲಿ ತೊಡಗಿರುವ ಬಗ್ಗೆ ತಾವು ಸೂಕ್ತ ದಾಖಲೆಗಳನ್ನು ಸಂಗ್ರಹಿಸಿದ್ದು, ಅವರ ಮೇಲಾಧಿಕಾರಿಗಳಿಗೆ ಈ ಘಟನೆಯ ಬಗ್ಗೆ ದಾಖಲೆಯೊಂದಿಗೆ ಮಾಹಿತಿ ನೀಡಲಾಗಿದೆ” ಎಂದು ವಿವರಿಸಿದರು.

ಇದೇ ಸಂದರ್ಭದಲ್ಲಿ ವಿಲಾಸ ಅವರು ತಮ್ಮ ಮೊಬೈಲ್ ನಲ್ಲಿ ಸಂಗ್ರಹಿಸಿದ್ದ ತಹಸೀಲ್ದಾರ್ ಕೋಮಾರ ಮತ್ತು ಗ್ರೇಡ್-2 ತಹಸೀಲ್ದಾರ್ ತಂಗೊಳ್ಳಿ ಅವರು ಮದ್ಯದ ಗ್ಲಾಸ್ ಮುಂದೆ ಕುಳಿತಿರುವ, ಮದ್ಯದ ಅಮಲಿನಲ್ಲಿ ತೂರಾಡುತ್ತಿರುವ ಮತ್ತು ತಹಸೀಲ್ದಾರ್ ಕೋಮಾರ ಅವರು ಕಚೇರಿ ವೇಳೆಯಲ್ಲಿ ಸರ್ಕಾರಿ ಕಚೇರಿಯಲ್ಲಿ ಕುಳಿತು ಗಾಢವಾಗಿ ನಿದ್ರಿಸುತ್ತಿರುವ ದೃಶ್ಯಾವಳಿಗಳನ್ನು ಮಾಧ್ಯಮ ಪ್ರತಿನಿಧಿಗಳಿಗೆ ತೋರಿಸಿದರು. 

ಬಳಿಕ ಮಾತನಾಡಿ ಢಾಬಾದಲ್ಲಿ ಲಭ್ಯವಿರುವ ಸಿಸಿ ದೃಶ್ಯಾವಳಿಗಳನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಸಾಗರ ಕೋಳೆಕರ ಹಾಗೂ ಇತರರು ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button