CrimeKarnataka NewsLatest

*ದಾಂಡಿಯಾ ನೃತ್ಯ ಕಾರ್ಯಕ್ರಮದ ವೇಳೆ ಯುವಕನಿಗೆ ಚಾಕು ಇರಿದು ಬರ್ಬರ ಹತ್ಯೆ*

ಪ್ರಗತಿವಾಹಿನಿ ಸುದ್ದಿ: ದಸರಾ ಸಂಭ್ರಮದ ದಾಂಡಿಯಾ ನೃತ್ಯ ಕಾರ್ಯಕ್ರಮದ ವೇಳೆ ಗಲಾಟೆ ನಡೆದು ಯುವಕನೊಬ್ಬನಿಗೆ ಚಾಕು ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘೋರ ಘಟನೆ ನಡೆದಿದೆ.

25 ವರ್ಷದ ನಿತಿನ್ ನಿಂಬಾಳ್ಕರ್ ಹತ್ಯೆಯಾದ ಯುವಕ. ಸಂಭ್ರಮದಿಂದ ನಡೆಯುತ್ತಿದ್ದ ದಾಂಡಿಯಾ ನೃತ್ಯ ಕಾರ್ಯಕ್ರಮ ಇದ್ದಕ್ಕಿದ್ದಂತೆ ರಣರಂಗವಾಗಿ ಮಾರ್ಪಟ್ಟಿದ್ದು, ನೆತ್ತರು ಹರಿದಿದೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ವಿನಾಯಕ ನಗರದಲ್ಲಿ ಆಯೋಜಿಸಲಾಗಿದ್ದ ದಾಂಡಿಯಾ ನೃತ್ಯ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಶ್ರೀನಿವಾಸ ಕದರಿ ಎಂಬ ಯುವಕ ನಿತಿನ್ ನಿಂಬಾಳ್ಕರ್(25)ನ ಹತ್ಯೆ ಮಾಡಿದ್ದಾನೆ.

ದಾಂಡಿಯಾ ನೃತ್ಯ ಕಾರ್ಯಕ್ರಮದ ವೇಳೆ ಶ್ರೀನಿವಾಸ್​ ಕದರಿ ಎಂಬಾತ ಮದ್ಯ ಹಾಗೂ ಗಾಂಜಾ ಮತ್ತಿನಲ್ಲಿ ತೇಲಾಡುತ್ತ ಬಂದಿದಲ್ಲದೇ ಯುವತಿಯರನ್ನು ಚುಡಾಯಿಸುತ್ತಿದ್ದ. ಅಲ್ಲದೇ ಪೂಜೆ ಮಾಡುತ್ತಿದ್ದ ಯುವಕರೊಂದಿಗೂ ಕಿರಿಕ್​ ಮಾಡಿದ್ದ.

ಅಲ್ಲಿದ್ದ ನಿತಿನ್ ನಿಂಬಾಳ್ಕರ್​​, ಶ್ರೀನಿವಾಸ್ ಗೆ ಇಲ್ಲಿಂದ ಹೋಗು ಸುಮ್ಮನೇ ಕಿರಿಕ್ ಮಾಡಬೇಡ ಎಂದು ಕಳುಹಿಸಿದ್ದ. ಆದರೂ ವಾಪಸ್ ಬಂದ ಶ್ರೀನಿವಾಸ್ ಮತ್ತೆ ಗಲಾಟೆ ಮಾಡಲು ಶುರುಮಾಡಿದ್ದ. ಈ ವೇಳೆ ನಿತಿನ್​​ ಒಂದೇಟು ಹೊಡೆದು ಕಳಿಸಿದ್ದಾನೆ. ಅಲ್ಲಿಂದ ತನ್ನ ಏರಿಯಾಗೆ ಹೋದ ಶ್ರೀನಿವಾಸ್, ಸ್ನೇಹಿತರಾದ ಸಂಪತ್ ಮತ್ತು ಪ್ರದೀಪ್‌ನನ್ನು ಕರೆದುಕೊಂಡು ಬಂದು ಪುನಃ ನಿತಿನ್ ಜೊತೆ ಜಗಳ ಮಾಡಿದ್ದಾರೆ. ನೋಡನೋಡುತ್ತಿದ್ದಂತೆ ಜಗಳ ವಿಕೋಪಕ್ಕೆ ತಿರುಗಿದ್ದು, ಶ್ರೀನಿವಾಸ್ ಕದರಿ, ಏಕಾಏಕಿ ಚಾಕುವಿನಿಂದ ನಿತಿನ್ ನ ಎದೆ, ಹೊಟ್ಟೆಗೆ ಇರಿದು ಕೊಲೆ ಮಾಡಿದ್ದಾನೆ.

ಜಗಳ ಬಿಡಿಸಲು ಬಂದ ನಿತಿನ್ ಚಿಕ್ಕಪ್ಪ ಸಂಜಯ್ ನಿಂಬಾಳ್ಕರ್​​​ಗೂ ಚಾಕುವಿನಿಂದ ಇರಿಯಲಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಎಸ್ ಪಿ ಸಿದ್ಧಾರ್ಥ್ ಗೋಯಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button