*ಟೈಗರ್ ಶ್ರಾಫ್ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್:* *ಇಬ್ಬರು ಮಹಿಳೆಯರ ಬಂಧನ*

ಶಸ್ತ್ರಾಸ್ತ್ರ ಸಾಗಣೆಯಲ್ಲಿ ಮಹಿಳೆಯರ ಪಾತ್ರ
ಪ್ರಗತಿವಾಹಿನಿ ಸುದ್ದಿ: ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಂಡಿದ್ದು, ದೆಹಲಿ ಪೊಲೀಸರ ವಿಶೇಷ ತಂಡ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರನ್ನು ಬಂಧಿಸಿದೆ.
ಕುನಾಲ್, ಸುಮಿತ್, ರಾಧಾ ಮತ್ತು ಬಬಿತಾ ಬಂಧಿತ ಆರೋಪಿಗಳಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಅವರನ್ನು ಮುಂಬೈ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ವರದಿಯಾಗಿದೆ.
ನಟನ ಮೇಲೆ ನಡೆದ ಗುಂಡಿನ ದಾಳಿಯ ಹಿಂದೆ ವ್ಯವಸ್ಥಿತ ಸಂಚು ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಶಸ್ತ್ರಾಸ್ತ್ರಗಳ ಸಂಗ್ರಹಣೆ, ಸಾಗಣೆ ಹಾಗೂ ದಾಳಿಗೆ ಹಣಕಾಸಿನ ನೆರವು ನೀಡಿದವರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಶಸ್ತ್ರಾಸ್ತ್ರ ಸಾಗಣೆಯ ಹೊಣೆ ಮಹಿಳೆಯರಿಗೆ
ಕುನಾಲ್ ಮತ್ತು ಸುಮಿತ್ ದಾಳಿಗೆ ಅಗತ್ಯವಿದ್ದ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವ ಜವಾಬ್ದಾರಿ ಹೊತ್ತಿದ್ದರು. ರಾಧಾ ಮತ್ತು ಬಬಿತಾ ಬಂದೂಕುಗಳನ್ನು ಮುಂಬೈಗೆ ಸಾಗಿಸುವ ಕಾರ್ಯದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.
ರಾಧಾ ಮತ್ತು ಬಬಿತಾಳನ್ನು ನವದೆಹಲಿ ರೈಲು ನಿಲ್ದಾಣದಲ್ಲಿ ಬಂಧಿಸಲಾಗಿದ್ದು, ಕುನಾಲ್ ಮತ್ತು ಸುಮಿತ್ರನ್ನು ಹರಿಯಾಣದ ಸೋನಿಪತ್ನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರಲ್ಲಿ ಕುನಾಲ್ಗೆ 21 ವರ್ಷ ಹಾಗೂ ಸುಮಿತ್ಗೆ 19 ವರ್ಷ ವಯಸ್ಸಾಗಿದೆ. ಕುನಾಲ್ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದ ಎಂದು ತನಿಖಾ ಮೂಲಗಳು ತಿಳಿಸಿವೆ.
ಎರಡು ತಿಂಗಳ ಹಿಂದೆಯೇ ರೂಪುಗೊಂಡಿತ್ತಾ ಸಂಚು?
ಕುನಾಲ್ ಅಮೃತಸರದಿಂದ ಒಂದು ಪಿಸ್ತೂಲ್ ಮತ್ತು 20 ಜೀವಂತ ಕಾರ್ಟ್ರಿಡ್ಜ್ಗಳನ್ನು ಪಡೆದುಕೊಂಡಿದ್ದ ಎನ್ನಲಾಗಿದೆ. ಸುಮಾರು ಎರಡು ತಿಂಗಳ ಹಿಂದೆ ರಾಧಾಳನ್ನು ಸಂಪರ್ಕಿಸಿದ್ದ ಆತ, ಶಸ್ತ್ರಾಸ್ತ್ರಗಳನ್ನು ಮುಂಬೈಗೆ ಸಾಗಿಸಲು ಆಕೆಯನ್ನು ಒಪ್ಪಿಸಿದ್ದ ಎಂದು ವರದಿಯಾಗಿದೆ.
ಅಕ್ಟೋಬರ್ 15ರಂದು ಕುನಾಲ್, ರಾಧಾ ಮತ್ತು ಬಬಿತಾಳನ್ನು ಮುಂಬೈ ಪ್ರಯಾಣಕ್ಕಾಗಿ ನವದೆಹಲಿ ರೈಲು ನಿಲ್ದಾಣಕ್ಕೆ ಕರೆತಂದಿದ್ದ. ಎನ್ಕ್ರಿಪ್ಟ್ ಮಾಡಿದ ಆ್ಯಪ್ ಮೂಲಕ ಆರೋಪಿಗಳು ಪರಸ್ಪರ ಸಂಪರ್ಕದಲ್ಲಿದ್ದು, ಅನಿಲ್ ಪಂಡಿತ್ ಎಂಬಾತನ ಸೂಚನೆಗಳನ್ನು ಪಾಲಿಸುತ್ತಿದ್ದರು ಎನ್ನಲಾಗಿದೆ.
ಮುಂಬೈನ ದಾದರ್ ರೈಲು ನಿಲ್ದಾಣ ತಲುಪಿದ ಬಳಿಕ ಹೋಟೆಲ್ನಲ್ಲಿ ತಂಗಿದ್ದ ಆರೋಪಿಗಳು, ಅಪ್ರಾಪ್ತ ಬಾಲಕನ ಮೂಲಕ ಶಸ್ತ್ರಾಸ್ತ್ರಗಳಿದ್ದ ಬ್ಯಾಗ್ ಅನ್ನು ಮತ್ತೊಬ್ಬರಿಗೆ ಹಸ್ತಾಂತರಿಸಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಬಳಿಕ ನಡೆದ ಗುಂಡಿನ ದಾಳಿಯ ನಂತರ ರಾಧಾ ಮತ್ತು ಬಬಿತಾ ರೈಲಿನಲ್ಲಿ ದೆಹಲಿಗೆ ವಾಪಸಾಗಿದ್ದರು ಎನ್ನಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




