*ಜಂಬೂಸವಾರಿಯಲ್ಲಿ ಇದೇ ಮೊದಲ ಬಾರಿಗೆ ಚಿತ್ರತಾರೆಯರು*: *‘ಅಂಬಾರಿ’ ಬಸ್ನಲ್ಲಿ ಸ್ಯಾಂಡಲ್ವುಡ್ ನಟ-ನಟಿಯರ ಸಂಚಾರ*

ಪ್ರಗತಿವಾಹಿನಿ ಸುದ್ದಿ: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಗೆ ಈ ಬಾರಿ ಸ್ಯಾಂಡಲ್ವುಡ್ನ ತಾರಾಗಣ ವಿಶೇಷ ಮೆರುಗು ತಂದಿದೆ.
ದಸರಾ ಸಂಭ್ರಮವನ್ನು ಕಣ್ಣುಂಬಿಕೊಳ್ಳಲು ಮೈಸೂರಿಗೆ ಆಗಮಿಸಿದ ಕನ್ನಡ ಚಿತ್ರರಂಗದ ಪ್ರಮುಖ ನಟ-ನಟಿಯರು, ಪ್ರವಾಸಿಗರ ಆಕರ್ಷಣೆಯಾಗಿರುವ ತೆರೆದ ‘ಅಂಬಾರಿ’ (Double Decker Open Top Bus) ಬಸ್ನಲ್ಲಿ ನಗರ ಪ್ರದಕ್ಷಿಣೆ ನಡೆಸಿ ದಸರಾ ಕಳೆ ಹೆಚ್ಚಿಸಿದರು.
ಹಿರಿಯ ಕಲಾವಿದರು ಹಾಗೂ ಹೊಸ ತಲೆಮಾರಿನ ನಟ-ನಟಿಯರು, ತಂತ್ರಜ್ಞರು ದಸರಾ ಹಬ್ಬದ ಸಲುವಾಗಿ ಮೈಸೂರಿನಲ್ಲಿ ಒಟ್ಟಿಗೆ ಸೇರಿದ್ದಾರೆ. ಫಿಲ್ಮ್ ಚೇಂಬರ್ ಅಧ್ಯಕ್ಷೆ ಡಾ.ಜಯಮಾಲಾ, ನಟರಾದ ರವಿಚಂದ್ರನ್, ಕಿಚ್ಚ ಸುದೀಪ್, ರಮೇಶ್ ಅರವಿಂದ್, ನೆನಪಿರಲಿ ಪ್ರೇಮ್, ಗಣೇಶ್, ತರುಣ್ ಸುಧೀರ್, ದೊಡ್ಡಣ್ಣ, ಮುಖ್ಯಮಂತ್ರಿ ಚಂದ್ರು, ಸುಂದರ್ ರಾಜ್, ದೇವರಾಜ್, ಶರಣ್, ಶ್ರೀರಾಮ್, ಶೃತಿ, ವಿಜಯಲಕ್ಷ್ಮಿ ಸಿಂಗ್, ಹೇಮಾ ಚೌಧರಿ, ಪೂಜಾ ಗಾಂಧಿ, ಸೋನಲ್, ರಾಗಿಣಿ ದ್ವಿವೇದಿ, ರುಕ್ಮಿಣಿ ವಸಂತ್, ತಪಸ್ವಿನಿ ಪೂಣಚ್ಚ, ಸಪ್ತಮಿ ಗೌಡ ಸೇರಿದಂತೆ ಕನ್ನಡ ಚಿತ್ರರಂಗದ ಬಹುತೇಕ ನಟ-ನಟಿಯರು ಭಾಗಿಯಾಗಿದ್ದಾರೆ.

ಸಂಜೆ 4:30ಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಂಬೂಸವಾರಿಗೆ ಚಾಲನೆ ನೀಡಲಿದ್ದಾರೆ. ನಾಡ ಅದಿದೇವತೆ ಚಾಮುಂಡಿ ದೇವಿ ವಿರಾಜಮಾನವಾಗಿರುವ 750 ಕೆಜಿ ಚಿನ್ನದ ಅಂಬಾರಿ ಹೊತ್ತು ಕ್ಯಾಪ್ಟನ್ ಪ್ರಶಾಂತ ಆನೆ ಜಂಬೂಸವಾರಿ ಮೆರವಣಿಗೆಯಲ್ಲಿ ಸಾಗಲಿದ್ದಾನೆ. ನಿಶಾನೆ, ಕುಮ್ಕಿ ಆನೆಗಳು ಸಾಥ್ ನೀಡಲಿವೆ.
ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಕನ್ನಡ ಚಿತ್ರರಂಗದ ನಟ-ನಟಿಯರು ಜಂಬೂಸವಾರಿ ಮೆರವಣಿಗೆಯಲ್ಲಿ ಒಟ್ಟಾಗಿ ಸಾಗಲಿದ್ದಾರೆ. ಈಗಾಗಲೇ ಅರಮನೆಯ ಅಂಗದಲ್ಲಿ ಕಲಾತಂಡಗಳು, ಸ್ಥಬ್ಧಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಸಜ್ಜುಗೊಂಡಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



