CrimeKannada NewsKarnataka NewsLatest

*ಟ್ರ್ಯಾಕ್ಟರ್‌ನಿಂದ ಬಿದ್ದು 7 ವರ್ಷದ ಬಾಲಕ ಸಾವು*: *ಸಿಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ!*

ಪ್ರಗತಿವಾಹಿನಿ ಸುದ್ದಿ: ಆಸ್ಪತ್ರೆ ಮುಂಭಾಗದಲ್ಲೇ ಟ್ರ್ಯಾಕ್ಟರ್‌ ಹರಿದು ಏಳು ವರ್ಷದ ಬಾಲಕ ದಾರುಣವಾಗಿ ಮೃತಪಟ್ಟಿದ್ದಾನೆ. ಘಟನೆಯ ಭೀಕರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕುಟುಂಬದಲ್ಲಿ ಶೋಕ ಆವರಿಸಿದೆ.

ಮೃತ ಬಾಲಕನನ್ನು ಮೋಹನ್ ಎಂದು ಗುರುತಿಸಲಾಗಿದೆ. ಕೋಲಾರ ನಗರದ ಇಟಿಸಿಎಂ ಆಸ್ಪತ್ರೆ ಮುಂಭಾಗದಲ್ಲೇ ಘಟನೆ ನಡೆದಿದೆ. ವೇಮಗಲ್ ಗ್ರಾಮದ ಮಂಜೇಶ್ ಮತ್ತು ಆತನ ತಮ್ಮ ವಾಸು, ಬಂಗಾರಪೇಟೆಯಿಂದ ಟ್ರ್ಯಾಕ್ಟರ್‌ನಲ್ಲಿ ಮರದ ಸಾಮಗ್ರಿಗಳನ್ನು ಸಾಗಿಸಿಕೊಂಡು ವಾಪಸಾಗುತ್ತಿದ್ದರು. ಮನೆ ನಿರ್ಮಾಣದ ಕೆಲಸಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ಸಾಗಿಸಿ ಹಿಂದಿರುಗುವ ವೇಳೆ ಈ ದುರಂತ ಸಂಭವಿಸಿದೆ.

ಟ್ರ್ಯಾಕ್ಟರ್‌ನಲ್ಲಿ ಮೋಹನ್ ತನ್ನ ಚಿಕ್ಕಪ್ಪ ವಾಸು ಮಡಿಲಲ್ಲಿ ಕುಳಿತಿದ್ದ. ಇಟಿಸಿಎಂ ಆಸ್ಪತ್ರೆ ಮುಂಭಾಗದ ರಸ್ತೆ ಹಂಪ್ಸ್ ಬಳಿ ಟ್ರ್ಯಾಕ್ಟರ್ ಸಾಗುತ್ತಿದ್ದಾಗ ಬಾಲಕ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಟ್ರ್ಯಾಕ್ಟರ್ ಬಾಲಕನ ಮೇಲೆಯೇ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಹಂಪ್ಸ್ ಬಳಿ ಟ್ರ್ಯಾಕ್ಟರ್ ವೇಗವಾಗಿ ಚಲಿಸಿದ್ದೇ ಅಪಘಾತಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿದೆ. ರಸ್ತೆ ಹಂಪ್ಸ್‌ನ ವಿನ್ಯಾಸ ಮತ್ತು ಚಾಲಕನ ನಿರ್ಲಕ್ಷ್ಯದ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ಬಾಲಕ ಟ್ರ್ಯಾಕ್ಟರ್‌ನಿಂದ ಕೆಳಗೆ ಬೀಳುವುದು ಮತ್ತು ವಾಹನ ಆತನ ಮೇಲೆ ಹರಿಯುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಘಟನೆಗೆ ಸಂಬಂಧಿಸಿದಂತೆ ಕೋಲಾರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button