Kannada NewsNationalPolitics

*ಪ್ರಿಯಾಂಕಾ ಗಾಂಧಿ ಪುತ್ರನ ಛಾಯಾಚಿತ್ರ ಪ್ರದರ್ಶನಕ್ಕೆ ಕೊನೇ ಕ್ಷಣದಲ್ಲಿ ಅಡ್ಡಿ: 74 ಫೋಟೋಗಳು ಬಲವಂತದಿಂದ ತೆರವು*: *ಏನಿದು ಪ್ರಕರಣ?*

ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್ ನಾಯಕಿ, ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪುತ್ರ, ಛಾಯಾಗ್ರಾಹಕ ರೆಹಾನ್ ವಾದ್ರಾ ಅವರ ಛಾಯಾಚಿತ್ರ ಪ್ರದರ್ಶನದ ವೇಳೆ ಕೊನೇ ಕ್ಷಣದಲ್ಲಿ ಅಡ್ಡಿ ಪಡಿಸಲಾಗಿದ್ದು, 74 ಛಾಯಾ಼ಚಿತ್ರಗಳನ್ನು ಬಲವಂತದಿಂದ ತೆರವುಗೊಳಿಸಿದ ಘಟನೆ ನಡೆದಿದೆ.

ರೆಹಾನ್ ವಾದ್ರಾ ಆಯೋಜಿಸಿದ್ದ ಏಕವ್ಯಕ್ತಿ ಕಲಾ ಪ್ರದರ್ಶನದ ವೇಳೆ ನವದೆಹಲಿಯ ಬಿಕಾನೆರ್ ಹೌಸ್ ನಲ್ಲಿ ಈ ಘಟನೆ ನಡೆದಿದೆ. ಇದು ತೀವ್ರ ವಿವಾದಕ್ಕೆ ಕಾರಣವಾಗಿದೆ.

ದೆಹಲಿಯಲ್ಲಿ ಇತ್ತೀಚೆಗೆ ನಡೆದ ವಿದ್ಯಾರ್ಥಿ ಮತ್ತು ಯುವಕರ ಪ್ರತಿಭಟನೆಗಳನ್ನು ಬಿಂಬಿಸುವ ಸುಮಾರು 74 ಛಾಯಾಚಿತ್ರಗಳನ್ನು ಬಿಕಾನೆರ್ ಹೌಸ್‌ ನಿಂದ ಆಡಳಿತ ಮಂಡಳಿಯು ಬಲವಂತವಾಗಿ ತೆರವುಗೊಳಿಸಿದೆ ಎನ್ನಲಾಗಿದೆ.

ರೆಹಾನ್ ವಾದ್ರಾ ‘ನೋ ಐಡಿಯಾ ಈಸ್ ಫೈನಲ್’ ಹೆಸರಿನಲ್ಲಿ ತಮ್ಮ ಮೂರನೇ ಏಕವ್ಯಕ್ತಿ ಕಲಾ ಪ್ರದರ್ಶನವನ್ನು ಆಯೋಜಿಸಿದ್ದರು. ಇದರಲ್ಲಿ ವನ್ಯಜೀವಿಗಳು, ಅಮೂರ್ತ ಕಲೆ ಮತ್ತು ಕಳೆದ ಆರು ತಿಂಗಳಲ್ಲಿ ದೆಹಲಿಯಲ್ಲಿ ನಡೆದ ಯುವ ಚಳವಳಿಗಳ ಬೀದಿ ಛಾಯಾಗ್ರಹಣ ಸೇರಿದಂತೆ 100ಕ್ಕೂ ಹೆಚ್ಚು ಕಲಾಕೃತಿಗಳನ್ನು ಇರಿಸಲಾಗಿತ್ತು. ಆದರೆ, ಪ್ರದರ್ಶನ ಆರಂಭವಾಗಲು ಕೆಲವೇ ಗಂಟೆಗಳು ಬಾಕಿ ಇರುವಾಗ, ಪ್ರದರ್ಶನದ 74 ಫೋಟೋಗಳು ತೆಗೆದುಹಾಕುವಂತೆ ಬಿಕಾನೆರ್ ಹೌಸ್ ಆಡಳಿತ ಸೂಚಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ರೆಹಾನ್ ವಾದ್ರಾ, “ಸಂಜೆ 5 ಗಂಟೆಯೊಳಗೆ ಪ್ರತಿಭಟನಾ ಚಿತ್ರಗಳನ್ನು ತೆಗೆಯದಿದ್ದರೆ ಇಡೀ ಪ್ರದರ್ಶನವನ್ನೇ ರದ್ದುಗೊಳಿಸುವುದಾಗಿ ಮಧ್ಯಾಹ್ನ 3.30ಕ್ಕೆ ಆಡಳಿತ ಎಚ್ಚರಿಕೆ ನೀಡಿತು. ದೇಶದ ಪ್ರಸ್ತುತ ರಾಜಕೀಯ ವಾತಾವರಣದಲ್ಲಿ ಇಂತಹ ಫೋಟೋಗಳನ್ನು ಪ್ರದರ್ಶಿಸಲು ಇದು ಸರಿಯಾದ ಸಮಯವಲ್ಲ ಎಂದು ಸಮರ್ಥಿಸಿಕೊಂಡರು” ಎಂದು ತಿಳಿಸಿದ್ದಾರೆ.

ತ್ರಿವರ್ಣ ಧ್ವಜವನ್ನು ಒಳಗೊಂಡ ಎರಡು ಛಾಯಾಚಿತ್ರಗಳನ್ನು ತೆಗೆಯುವಂತೆ ಕೇಳಿದರು. ಆದರೆ ಭಾರತೀಯ ಧ್ವಜದ ಚಿತ್ರವನ್ನು ತೆಗೆದುಹಾಕಲು ನಾನು ಖಡಾಖಂಡಿತವಾಗಿ ನಿರಾಕರಿಸಿದೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ಈ ಚಿತ್ರಗಳು ಯಾವುದೇ ರಾಜಕೀಯ ಸಂದೇಶ ಹೊಂದಿಲ್ಲ, ಸಮಾಜದಲ್ಲಿ ನಡೆಯುವುದನ್ನು ದಾಖಲಿಸುವುದು ಕಲಾವಿದನಾಗಿ ನನ್ನ ಕರ್ತವ್ಯ. ಪ್ರದರ್ಶನದ ಸಂಪೂರ್ಣ ವಿನ್ಯಾಸವನ್ನು ಮೊದಲೇ ನೀಡಿದ್ದರೂ ಕೊನೆ ಕ್ಷಣದಲ್ಲಿ ಶೇ.50 ಕಲಾಕೃತಿಗಳನ್ನು ಸೆನ್ಸಾರ್ ಮಾಡಲಾಗಿದೆ. ಮುಂದೆ ಸೂಕ್ತ ಸ್ಥಳ ಸಿಕ್ಕಾಗ ಇಡೀ ಸಂಗ್ರಹವನ್ನು ಸಾರ್ವಜನಿಕರಿಗೆ ಪ್ರದರ್ಶಿಸುತ್ತೇನೆ ಎಂದಿದ್ದಾರೆ.

ಈ ಬಗ್ಗೆ ತೀವ್ರ ಖಂಡನೆ ವ್ಯಕ್ತಪಡಿಸಿರುವ ಪ್ರಿಯಾಂಕಾ ಗಾಂಧಿ, ದೇಶಾದ್ಯಂತ ಯುವಕರ ಧ್ವನಿ ಅಡಗಿಸುವ ಕೆಲಸ ನಡೆಯುತ್ತಿದೆ. ಇಂದು ನನ್ನ ಮಗನಿಗೆ ಹೀಗಾಗಿದೆ. ನಾಳೆ ಬೇರೊಬ್ಬ ಕಲಾವಿದನಿಗೂ ಹೀಗೆ ಆಗಬಹುದು ಎಂದಿದ್ದಾರೆ.

ಇನ್ನು ಎಐಸಿಸಿ ಮುಖಂಡ ಪವನ್ ಖೇರಾ, ತ್ರಿವರ್ಣ ಧ್ವಜ ಕೂಡ ಸೆನ್ಸಾರ್ ಕತ್ತರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರೆ, ಸಮಸ್ಯೆ ಇರುವುದು ಕಲೆಯಲ್ಲಲ್ಲ, ಅಧಿಕಾರದಲ್ಲಿರುವವರ ಮನಸ್ಥಿತಿಯಲ್ಲಿ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button