*ಪೂಜೆಗೆ ತೆರಳುತ್ತಿದ್ದ ಸಚಿವರು, ಶಾಸಕರನ್ನು ಅಡ್ಡಗಟ್ಟಿದ ಎಸ್ ಪಿ*: *ಹೈಡ್ರಾಮಾ*

ಪ್ರಗತಿವಾಹಿನಿ ಸುದ್ದಿ: ಪೂಜೆಗೆ ತೆರಳುತ್ತಿದ್ದ ಸಚಿವರು ಹಾಗೂ ಶಾಸಕರನ್ನು ಎಸ್ ಪಿ ರಿಷ್ಯಂತ್ ಅಡ್ಡಗಟ್ಟಿ ತಡೆದ ಘಟನೆ ನಡೆದಿದೆ. ಇದರಿಂದಾಗಿ ಸಚಿವರು, ಶಾಸಕರು ಕೆಲಕಾಲ ಮುಜುಗರಕ್ಕೀಡಾದರು.
ನಂದಿ ಕಂಬ ಪೂಜೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಂಭ್ರಮದ ನಡುವೆ ಐತಿಹಾಸಿಕ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ನಡೆದ ‘ನಂದಿ ಕಂಬ ಪೂಜೆ’ ವೇಳೆ ಆಡಳಿತ ಪಕ್ಷದ ಸಚಿವರು ಹಾಗೂ ಪೊಲೀಸ್ ಇಲಾಖೆ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.
ಭದ್ರತೆಯ ಕಾರಣ ನೀಡಿ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಅವರು ಸಚಿವರು ಹಾಗೂ ಜನಪ್ರತಿನಿಧಿಗಳನ್ನು ಪೂಜೆಗೆ ತೆರಳದಂತೆ ಅಡ್ಡಗಟ್ಟಿರುವುದು ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಗೂ ಮುನ್ನ ಮುಖ್ಯಮಂತ್ರಿಗಳ ಜೊತೆ ಆಗಮಿಸುವ ಸಚಿವ ಶಿವರಾಜ್ ತಂಗಡಗಿ, ನರೇಂದ್ರಸ್ವಾಮಿ ಹಾಗೂ ಶಾಸಕರು, ಗಣ್ಯರು ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಜರುಗುವ ಪವಿತ್ರ ‘ನಂದಿ ಕಂಬ’ಕ್ಕೆ (ನಂದಿ ಧ್ವಜ) ಪೂಜೆ ಸಲ್ಲಿಸಲು ತೆರಳುತ್ತಿದ್ದರು. ಈ ಬಾರಿ ಸಿಎಂ ಜೊತೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರನ್ನು ಮಾತ್ರ ನಂದಿ ಕಂಬ ಪೂಜೆಗೆ ಬಿಡಲಾಗಿದ್ದು, ಅವರೊಂದಿಗೆ ಬಂದಿದ್ದ ಇತರ ಸಚಿವರು ಹಾಗೂ ಇತರೆ ಜನಪ್ರತಿನಿಧಿಗಳನ್ನು ಸ್ಥಳದಲ್ಲೇ ಎಸ್ಪಿ ರಿಷ್ಯಂತ್ ಅಡ್ಡಗಟ್ಟಿದ್ದಾರೆ.
ಶಿಷ್ಟಾಚಾರದ ಹೆಸರಿನಲ್ಲಿ ಮತ್ತು ಭದ್ರತೆಯ ನೆಪದಲ್ಲಿ ಏಕಾಏಕಿ ಪ್ರವೇಶ ನಿರಾಕರಿಸಿದ್ದರಿಂದ ಆಕ್ರೋಶಗೊಂಡ ಸ್ಥಳದಲ್ಲಿದ್ದ ಸಚಿವರು ಎಸ್ಪಿ ರಿಷ್ಯಂತ್ ಅವರೊಂದಿಗೆ ತೀವ್ರ ವಾಗ್ವಾದಕ್ಕಿಳಿದಿದ್ದಾರೆ. ನಂದಿ ಕಂಬ ಪೂಜೆಗೆ ಅವಕಾಶ ಮಾಡಿಕೊಡುವಂತೆ ಪಟ್ಟು ಹಿಡಿದಿದ್ದರಿಂದ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಇನ್ನು ಇದೇ ವೇಳೆ ಭದ್ರತೆಯ ಕಾರಣ ನೀಡಿ ಹಿರಿಯ ಶಾಸಕರಾದ ತನ್ವೀರ್ ಸೇಠ್ ಹಾಗೂ ಶಾಸಕ ಶ್ರೀವತ್ಸ ಅವರನ್ನು ಕೂಡ ಪೊಲೀಸರು ಅಡ್ಡಗಟ್ಟಿದ್ದಾರೆ. ಇದರಿಂದಾಗಿ ತನ್ವೀರ್ ಸೇಠ್ ಅವರು ಕೆಲಕಾಲ ಹೊರಗಡೆಯೇ ನಿಲ್ಲಬೇಕಾಯಿತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿಗಳು ಪರಿಸ್ಥಿತಿಯನ್ನು ಗಮನಿಸಿ, ತನ್ವೀರ್ ಸೇಠ್ ಅವರೊಂದಿಗೆ ಮಾತನಾಡಿ ಮನವೋಲಿಸಿ ಜತೆಯಲ್ಲಿಯೇ ಪೂಜೆಗೆ ಕರೆದುಕೊಂಡು ಹೋದರು.
ಅಂತಿಮವಾಗಿ ಮೇಲಿನವರ ಸೂಚನೆ ಮತ್ತು ಸಿಎಂ ಸೂಚನೆಯ ಮೇರೆಗೆ ಅವರನ್ನು ಪೂಜೆಗೆ ಒಳಗೆ ಬಿಡಲಾಯಿತು. ಸ್ಥಳದಲ್ಲಿದ್ದ ಮೈಸೂರಿನ ಇತರೆ ಶಾಸಕರಾದ ಅನಿಲ್ ಚಿಕ್ಕಮಾದು, ಡಿ. ರವಿಶಂಕರ್, ದರ್ಶನ ಧ್ರುವನಾರಾಯಣ್ ಹಾಗೂ ವಿಧಾನ ಪರಿಷತ್ ಸದಸ್ಯರಾದ ಕೆ. ಶಿವಕುಮಾರ್, ತಿಮ್ಮಯ್ಯ ಅವರಿಗೆ ಒಳಗೆ ಪ್ರವೇಶ ಸಿಗದ ಕಾರಣ ದೂರದಿಂದಲೇ ನಂದಿ ಧ್ವಜ ಪೂಜೆಯನ್ನು ವೀಕ್ಷಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




