*ಕರ್ನಾಟಕದಲ್ಲಿ ಮುಂದಿನ 3 ದಿನ ಮಳೆ ಅಬ್ಬರ*: *ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅಕ್ಟೋಬರ್ 23ರಿಂದ 25ರವರೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪ್ರಭಾವದಿಂದ ಹಿಂಗಾರು ಮಳೆ ಮತ್ತೆ ಚುರುಕಾಗುವ ನಿರೀಕ್ಷೆಯಿದೆ.
ಮೈಸೂರು, ಕೊಡಗು, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಮುನ್ನೆಚ್ಚರಿಕೆಯಾಗಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿಯೂ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನೆ ತಿಳಿಸಿದೆ.
ಮೈಸೂರು, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಅಕ್ಟೋಬರ್ 23ರಿಂದ 25ರವರೆಗೆ ಮಳೆಯಾಗುವ ಸಾಧ್ಯತೆಯಿದೆ. ಹಾಸನ ಜಿಲ್ಲೆಯಲ್ಲಿ ಕೂಡ ಈ ಅವಧಿಯಲ್ಲಿ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಮಂಡ್ಯದಲ್ಲಿ ಅಕ್ಟೋಬರ್ 25ರಂದು ಹಾಗೂ ಕೋಲಾರದಲ್ಲಿ ಅಕ್ಟೋಬರ್ 26ರಂದು ಮಳೆಯ ಎಚ್ಚರಿಕೆ ನೀಡಲಾಗಿದೆ. ಕರಾವಳಿಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ ಮತ್ತು ತುಮಕೂರು ಜಿಲ್ಲೆಗಳಲ್ಲಿಯೂ ಮುಂದಿನ ದಿನಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ತೀವ್ರ ಮಳೆಯ ಎಚ್ಚರಿಕೆ ಇಲ್ಲದಿದ್ದರೂ, ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಇದೇ ವೇಳೆ, ಬಂಗಾಳಕೊಲ್ಲಿಯಲ್ಲಿ ಹೊಸ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಅಕ್ಟೋಬರ್ 23ರ ಸುಮಾರಿಗೆ ಆಗ್ನೇಯ ಮತ್ತು ಪೂರ್ವ ಮಧ್ಯ ಬಂಗಾಳಕೊಲ್ಲಿಯ ಭಾಗದಲ್ಲಿ ವಾಯುಭಾರ ಕುಸಿತ ರೂಪುಗೊಳ್ಳುವ ನಿರೀಕ್ಷೆಯಿದ್ದು, ನಂತರ ಅದು ತೀವ್ರಗೊಳ್ಳುವ ಸಾಧ್ಯತೆಯಿದೆ. ಆದರೆ, ಇದು ಚಂಡಮಾರುತವಾಗಿ ರೂಪುಗೊಳ್ಳುವುದು ಇನ್ನೂ ಖಚಿತವಾಗಿಲ್ಲ. ಮುಂದಿನ ಬೆಳವಣಿಗೆಗಳ ಆಧಾರದ ಮೇಲೆ ಹವಾಮಾನ ಇಲಾಖೆ ಹೆಚ್ಚಿನ ಮಾಹಿತಿ ನೀಡಲಿದೆ.
ಮಳೆಯ ಹಿನ್ನೆಲೆಯಲ್ಲಿ ಸಾರ್ವಜನಿಕರು ಹವಾಮಾನ ಇಲಾಖೆಯ ಮುನ್ಸೂಚನೆಗಳನ್ನು ಗಮನಿಸಬೇಕು. ಗುಡುಗು-ಮಿಂಚು ಸಂದರ್ಭದಲ್ಲಿ ಮರಗಳ ಕೆಳಗೆ ಆಶ್ರಯ ಪಡೆಯುವುದನ್ನು ತಪ್ಪಿಸಬೇಕು. ತಗ್ಗು ಪ್ರದೇಶಗಳಲ್ಲಿ ವಾಸಿಸುವವರು ಸ್ಥಳೀಯ ಆಡಳಿತದ ಸೂಚನೆಗಳನ್ನು ಪಾಲಿಸುವುದು ಸುರಕ್ಷಿತ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




