*ದಸರಾ ಆನೆ ಅವಘಡ ಬೆನ್ನಲ್ಲೇ ಎಚ್ಚೆತ್ತ ಅರಣ್ಯ ಇಲಾಖೆ*: *ಜಂಬೂಸವಾರಿಗೆ ಜನ್ಮುಂದೆ ಹೊಸ ರೂಲ್ಸ್*

ಪ್ರಗತಿವಾಹಿನಿ ಸುದ್ದಿ: ಶಿವಮೊಗ್ಗ ದಸರಾ ಜಂಬೂಸವಾರಿ ವೇಳೆ ಸೋಮಣ್ಣ ಆನೆ ಬೆದರಿ ಓಡಿದ ಘಟನೆ ಬೆನ್ನಲ್ಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಮುಂದಿನ ವರ್ಷದಿಂದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳಿಗೆ 20 ದಿನಗಳಿಂದ ಒಂದು ತಿಂಗಳವರೆಗೆ ಕಡ್ಡಾಯ ತಾಲೀಮು ನೀಡುವಂತೆ ಸಚಿವ ರಾಮಲಿಂಗಾ ರೆಡ್ಡಿ ಅರಣ್ಯ ಇಲಾಖೆಗೆ ಸೂಚಿಸಿದ್ದಾರೆ.
ಅಕ್ಟೋಬರ್ 21ರಂದು ನಡೆದ ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಚಾಮುಂಡೇಶ್ವರಿ ದೇವಿಯ ಮೂರ್ತಿಯನ್ನು ಹೊತ್ತಿದ್ದ ಬೆಳ್ಳಿ ಅಂಬಾರಿಯನ್ನು ಸೋಮಣ್ಣ ಆನೆ ಹೊತ್ತೊಯ್ಯುತ್ತಿತ್ತು. ಮೆರವಣಿಗೆಯ ನಡುವೆ ಏಕಾಏಕಿ ಬೆದರಿದ ಆನೆ ನಿಯಂತ್ರಣ ತಪ್ಪಿ ಓಡಿದ್ದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಬೆಳ್ಳಿ ಅಂಬಾರಿ ನೆಲಕ್ಕೆ ಬಿದ್ದು ಹಾನಿಯಾಗಿದ್ದು, ಕಾರುಗಳು ಮತ್ತು ಬೈಕ್ಗಳಿಗೂ ಹಾನಿಯಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವ ರಾಮಲಿಂಗಾ ರೆಡ್ಡಿ, ಶಿವಮೊಗ್ಗ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಮುಂದಿನ ವರ್ಷದಿಂದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ನುರಿತ ಮಾವುತರು ಮತ್ತು ಕಾವಾಡಿಗರ ನೇತೃತ್ವದಲ್ಲಿ ಕನಿಷ್ಠ 20ರಿಂದ 30 ದಿನಗಳ ಕಾಲ ತಾಲೀಮು ನೀಡಲಾಗುತ್ತದೆ. ಜನಸಂದಣಿ, ವಾದ್ಯಗಳ ಸದ್ದು, ಮೆರವಣಿಗೆಯ ವಾತಾವರಣ ಸೇರಿದಂತೆ ವಿವಿಧ ಸಂದರ್ಭಗಳಿಗೆ ಆನೆಗಳನ್ನು ಮುಂಚಿತವಾಗಿಯೇ ಸಿದ್ಧಗೊಳಿಸುವುದು ಈ ತರಬೇತಿಯ ಉದ್ದೇಶವಾಗಿದೆ.
ಹಬ್ಬ-ಉತ್ಸವಗಳಲ್ಲಿ ಆನೆಗಳನ್ನು ಬಳಸುವ ಮೊದಲು ಅರಣ್ಯ ಇಲಾಖೆಯ ಅಗತ್ಯ ಅನುಮತಿಗಳನ್ನು ಪಡೆಯಬೇಕು ಮತ್ತು ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬ ಸೂಚನೆಯನ್ನೂ ನೀಡಲಾಗಿದೆ. ಶಿವಮೊಗ್ಗದ ಘಟನೆಯಿಂದ ಪಾಠ ಕಲಿತು, ಮುಂದಿನ ದಸರಾ ಮೆರವಣಿಗೆಗಳಲ್ಲಿ ಸಾರ್ವಜನಿಕರ ಸುರಕ್ಷತೆ ಹಾಗೂ ಆನೆಗಳ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಲು ಸರ್ಕಾರ ಮುಂದಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




