CrimeKannada NewsKarnataka NewsLatest

*ಗರ್ಭಿಣಿ ಪತ್ನಿಯನ್ನೇ ಕೊಂದು ಆತ್ಮಹತ್ಯೆಯೆಂದು ಬಿಂಬಿಸಲು ಯತ್ನ*: *ಪತಿ ಸೇರಿ ಇಬ್ಬರು ಅರೆಸ್ಟ್!*

ಪ್ರಗತಿವಾಹಿನಿ ಸುದ್ದಿ: 13 ವಾರಗಳ ಗರ್ಭಿಣಿ ಮಹಿಳೆಯ ಸಾವು ಆತ್ಮಹತ್ಯೆಯಲ್ಲ, ಕೊಲೆ ಎಂಬುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಪತ್ನಿಯನ್ನು ಕೊಂದು ಆತ್ಮಹತ್ಯೆಯಂತೆ ಬಿಂಬಿಸಲು ಯತ್ನಿಸಿದ ಆರೋಪದ ಮೇಲೆ ಪತಿ ಮತ್ತು ಆತನ ಸಹೋದರನನ್ನು ಬಂಧಿಸಲಾಗಿದೆ.

ಅಕ್ಟೋಬರ್ 17ರಂದು ಗುಜರಾತ್‌ನ ಖೇಡಾ ಜಿಲ್ಲೆಯ ಮಹುಧಾ ಪ್ರದೇಶದಲ್ಲಿ ಅರುಣಾಬೆನ್ ಸೋಧಾ ಎಂಬ ಮಹಿಳೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆರಂಭದಲ್ಲಿ ಆತ್ಮಹತ್ಯೆ ಎಂದು ಭಾವಿಸಲಾಗಿತ್ತು. ಆದರೆ ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ ಬಳಿಕ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು.

ಅರುಣಾಬೆನ್ ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದಾಗ ವೈದ್ಯರ ಬಳಿ ಕರೆದೊಯ್ಯುವಂತೆ ಪತಿ ಮಿತುಲ್‌ನನ್ನು ಪದೇಪದೇ ಕೇಳಿಕೊಂಡಿದ್ದರು. ಆದರೆ ಮಿತುಲ್ ಪತ್ನಿಯ ಮನವಿಯನ್ನು ನಿರ್ಲಕ್ಷಿಸಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ನೋವು ತಾಳಲಾರದೆ ಸತ್ತುಹೋಗುವುದಾಗಿ ಅರುಣಾಬೆನ್ ಹೇಳಿದಾಗ, ಪತಿ ಆತ್ಮಹತ್ಯೆ ಮಾಡಿಕೊಂಡರೆ ಕಾನೂನು ಪರಿಣಾಮಗಳೇನು ಎಂದು ಗೂಗಲ್‌ನಲ್ಲಿ ಹುಡುಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ತನಿಖೆಯ ಪ್ರಕಾರ, ಅರುಣಾಬೆನ್‌ನ ಬಾಯಿಗೆ ಅತ್ತೆ ಮತ್ತು ನಾದಿನಿ ಬಟ್ಟೆ ತುರುಕಿ ಕಿರುಚದಂತೆ ಕೈಕಾಲುಗಳನ್ನು ಹಿಡಿದುಕೊಂಡಿದ್ದರು. ಬಳಿಕ ಪತಿ ಮಿತುಲ್ ಮನೆಯಲ್ಲಿದ್ದ ನ್ಯಾನೋ ಯೂರಿಯಾ ರಾಸಾಯನಿಕವನ್ನು ಬಲವಂತವಾಗಿ ಬಾಯಿಗೆ ಸುರಿದಿದ್ದಾನೆ. ಇದರಿಂದ ಅರುಣಾಬೆನ್ ಮತ್ತು ಗರ್ಭದಲ್ಲಿದ್ದ ಮಗು ಮೃತಪಟ್ಟಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಕೃತ್ಯವನ್ನು ಮುಚ್ಚಿಹಾಕಲು ಆರೋಪಿಗಳು ಮೃತದೇಹವನ್ನು ಮನೆಯ ಹಿಂಭಾಗದ ಕೋಣೆಯ ಕಿಟಕಿಗೆ ನೈಲಾನ್ ಹಗ್ಗದಿಂದ ನೇತುಹಾಕಿ ಆತ್ಮಹತ್ಯೆಯಂತೆ ಬಿಂಬಿಸಲು ಯತ್ನಿಸಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಕುತ್ತಿಗೆಯ ಮೇಲಿನ ನೇಣಿನ ಹಗ್ಗದ ಗುರುತುಗಳು ಸಾವಿನ ನಂತರ ಉಂಟಾಗಿರುವುದು ಮತ್ತು ದೇಹದಲ್ಲಿ ವಿಷಕಾರಿ ರಾಸಾಯನಿಕದ ಅಂಶವಿರುವುದು ಪತ್ತೆಯಾಗಿದೆ. ಯೂರಿಯಾ ಸೇವನೆಯಿಂದ ಉತ್ಪತ್ತಿಯಾದ ವಿಷಕಾರಿ ಅಮೋನಿಯಾ ಅನಿಲದಿಂದ ಉಸಿರುಗಟ್ಟಿ ಸಾವು ಸಂಭವಿಸಿರುವುದು ವೈಜ್ಞಾನಿಕವಾಗಿ ಸಾಬೀತಾಗಿದೆ. 

ವೈದ್ಯಕೀಯ ವರದಿಗಳ ಆಧಾರದಲ್ಲಿ ಪೊಲೀಸರು ಪತಿ ಮಿತುಲ್ ಸೋಧಾ ಮತ್ತು ಆತನ ಸಹೋದರ ವಿಪುಲ್ ಸೋಧಾ ಅವರನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆಯ ಮೇರೆಗೆ ತಲೆಮರೆಸಿಕೊಂಡಿರುವ ಅತ್ತೆ ಮತ್ತು ನಾದಿನಿಯ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button