*ಕಿತ್ತೂರು ಉತ್ಸವಕ್ಕೆ ಅದ್ಧೂರಿ ಚಾಲನೆ; ಕೋಟೆ ಆವರಣದಲ್ಲಿ ಸಂಭ್ರಮ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವೀರರಾಣಿ ಕಿತ್ತೂರು ಚನ್ನಮ್ಮನ ವಿಜಯದ ಸ್ಮರಣಾರ್ಥ ನಡೆಯುವ ಮೂರು ದಿನಗಳ ಕಿತ್ತೂರು ಉತ್ಸವಕ್ಕೆ ಶುಕ್ರವಾರ (ಅ.23) ಐತಿಹಾಸಿಕ ಕಿತ್ತೂರಿನಲ್ಲಿ ಅದ್ಧೂರಿ ಚಾಲನೆ ದೊರೆಯಿತು. ರಾಜ್ಯಾದ್ಯಂತ ಸಂಚರಿಸಿದ ವೀರಜ್ಯೋತಿಯನ್ನು ಸ್ವಾಗತಿಸಿ, ಕಿತ್ತೂರು ಸಂಸ್ಥಾನದ ಧ್ವಜಾರೋಹಣ ನೆರವೇರಿಸುವ ಮೂಲಕ ಶಾಸಕ ಬಾಬಾಸಾಹೇಬ ಪಾಟೀಲ ಉತ್ಸವಕ್ಕೆ ಚಾಲನೆ ನೀಡಿದರು.
ಚನ್ನಮ್ಮ ವೃತ್ತದಲ್ಲಿ ನಡೆದ ಕಾರ್ಯಕ್ರಮದ ಬಳಿಕ ವೀರರಾಣಿ ಕಿತ್ತೂರು ಚನ್ನಮ್ಮ ಸೇರಿದಂತೆ ಮಹನೀಯರ ಪುತ್ಥಳಿಗಳಿಗೆ ಗಣ್ಯರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಶಾಸಕ ಮಹಾಂತೇಶ ಕೌಜಲಗಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಜಾನಪದ ಕಲಾವಾಹಿನಿಗಳ ವೈಭವ
ಉತ್ಸವದ ಅಂಗವಾಗಿ ನಡೆದ ಜಾನಪದ ಕಲಾವಾಹಿನಿಗಳ ಮೆರವಣಿಗೆ ಜನರ ಗಮನ ಸೆಳೆಯಿತು. ಡೊಳ್ಳುಕುಣಿತ, ಜಗ್ಗಲಗಿ, ಕರಡಿ ಮಜಲು, ಗೊಂಬೆ ಕುಣಿತ, ಕಂಸಾಳೆ, ಚಂಡೆ ವಾದನ, ಕರ್ಬಲ ಕುಣಿತ, ನಾಸಿಕ ಡೋಲು ಸೇರಿದಂತೆ ವಿವಿಧ ಕಲಾತಂಡಗಳು ತಮ್ಮ ಪ್ರದರ್ಶನದ ಮೂಲಕ ಉತ್ಸವಕ್ಕೆ ಮತ್ತಷ್ಟು ಮೆರುಗು ನೀಡಿದವು. ವಿವಿಧ ಸರ್ಕಾರಿ ಯೋಜನೆಗಳು ಹಾಗೂ ಸೌಲಭ್ಯಗಳನ್ನು ಪರಿಚಯಿಸುವ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಗಮನ ಸೆಳೆದವು.
100 ವಸ್ತುಪ್ರದರ್ಶನ ಮಳಿಗೆಗಳು
ಕಿತ್ತೂರು ಕೋಟೆ ಆವರಣದಲ್ಲಿ ಸ್ಥಾಪಿಸಲಾದ ವಸ್ತುಪ್ರದರ್ಶನ ಹಾಗೂ ಫಲಪುಷ್ಪ ಪ್ರದರ್ಶನವನ್ನು ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಉದ್ಘಾಟಿಸಿದರು. ಕೃಷಿ, ಆರೋಗ್ಯ ಮತ್ತು ತೋಟಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ 100 ವಸ್ತುಪ್ರದರ್ಶನ ಮಳಿಗೆಗಳು ಹಾಗೂ 37 ಆಹಾರ ಮಳಿಗೆಗಳನ್ನು ತೆರೆಯಲಾಗಿದೆ.
ಕಿತ್ತೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಜನರು ಆಗಮಿಸಿ ಮಳಿಗೆಗಳನ್ನು ವೀಕ್ಷಿಸಿದರು. ಐತಿಹಾಸಿಕ ಕೋಟೆಯ ಆವರಣದಲ್ಲಿ ಜಾನಪದ ಕಲೆ, ಸಾಂಸ್ಕೃತಿಕ ವೈಭವ ಹಾಗೂ ಜನಸಂಭ್ರಮದೊಂದಿಗೆ ಮೂರು ದಿನಗಳ ಕಿತ್ತೂರು ಉತ್ಸವಕ್ಕೆ ಭವ್ಯ ಆರಂಭ ದೊರೆತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




