*ಪವಿತ್ರಾ ಗೌಡಗೆ ಕೋರ್ಟ್‌ನಲ್ಲಿ ಮತ್ತೆ ಹಿನ್ನಡೆ*: *ಬ್ಯಾರಕ್ ಬದಲಾವಣೆ ಅರ್ಜಿ ವಜಾ!*

ಪ್ರಗತಿವಾಹಿನಿ ಸುದ್ದಿ: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡಗೆ ನ್ಯಾಯಾಲಯದಲ್ಲಿ ಮತ್ತೆ ಹಿನ್ನಡೆಯಾಗಿದೆ. ಜೈಲಿನಲ್ಲಿ ಬ್ಯಾರಕ್ ಬದಲಾವಣೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು 59ನೇ ಸಿಸಿಎಚ್ ನ್ಯಾಯಾಲಯ ವಜಾಗೊಳಿಸಿದೆ. ಅಕ್ಟೋಬರ್ 23ರಂದು ಆದೇಶ ಪ್ರಕಟಿಸಿದ ನ್ಯಾಯಾಲಯ, ಪವಿತ್ರಾ ಗೌಡ ಮನವಿಯನ್ನು ತಿರಸ್ಕರಿಸಿದೆ.
ತಮ್ಮ ಬ್ಯಾರಕ್‌ನಲ್ಲಿರುವ ನೈಜೀರಿಯಾ ಮೂಲದ ಆರೋಪಿಗಳಿಂದ ಸಮಸ್ಯೆಯಾಗುತ್ತಿದೆ ಎಂದು ಪವಿತ್ರಾ ಗೌಡ ಅರ್ಜಿಯಲ್ಲಿ ತಿಳಿಸಿದ್ದರು. ಇತರ ಆರೋಪಿಗಳು ತಮ್ಮ ಉಡುಪುಗಳನ್ನು ಬಳಸುತ್ತಿದ್ದಾರೆ, ಪದೇಪದೇ ತೊಂದರೆ ನೀಡುತ್ತಿದ್ದಾರೆ ಮತ್ತು ಬ್ಯಾರಕ್‌ನಲ್ಲಿ ವಾಸಿಸಲು ಕಷ್ಟವಾಗುತ್ತಿದೆ ಎಂದು ದೂರಿದ್ದರು. ಜೈಲಿನ ವ್ಯವಸ್ಥೆ ಪರಿಶೀಲಿಸಲು ನ್ಯಾಯಾಧೀಶರ ಸಮಿತಿಯೇ ಭೇಟಿ ನೀಡಬೇಕು ಎಂದು ಮನವಿ ಮಾಡಿದ್ದರು.
ಇದರ ಜೊತೆಗೆ, ಬ್ಯಾರಕ್ ಬದಲಾವಣೆಗೆ ಅನುಮತಿ ನೀಡಬೇಕು ಹಾಗೂ ಪ್ರತ್ಯೇಕ ಆರೋಗ್ಯ ತಪಾಸಣೆಗೆ ಅವಕಾಶ ಕಲ್ಪಿಸಬೇಕು ಎಂದು ಪವಿತ್ರಾ ಗೌಡ ಕೋರಿದ್ದರು. ಈ ಅರ್ಜಿಯ ವಿಚಾರಣೆಯನ್ನು ನಡೆಸಿದ್ದ 59ನೇ ಸಿಸಿಎಚ್ ನ್ಯಾಯಾಲಯದ ನ್ಯಾಯಾಧೀಶೆ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ, ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.
ಪವಿತ್ರಾ ಗೌಡ ಮಾತ್ರವಲ್ಲದೆ, ಪ್ರಕರಣದ ಇತರ ಆರೋಪಿಗಳಾದ ಅನುಕುಮಾರ್ ಮತ್ತು ಜಗದೀಶ್ ಕೂಡ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಗಳನ್ನೂ ನ್ಯಾಯಾಲಯ ವಜಾಗೊಳಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




