Belagavi NewsBelgaum NewsCrimeKannada NewsKarnataka NewsNational

*ಬೆಳಗಾವಿ ಪೊಲೀಸರಿಂದ ಮಟಕಾ ಅಡ್ಡೆ ಮೇಲೆ ದಾಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಚ್ಚೆ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಟಕಾ ಜೂಜಾಟ ನಡೆಸುತ್ತಿದ್ದ ಅಡ್ಡೆ ಮೇಲೆ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ದಾಳಿ ನಡೆಸಿ ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ₹2,870 ನಗದು ಹಾಗೂ ಓಸಿ ಚೀಟಿಗಳನ್ನು ವಶಪಡಿಸಿಕೊಂಡಿದ್ದಾರೆ.

ಅ.23ರಂದು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ವಿ.ಡಿ. ಸರನಾಯಿಕ ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ, ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಪೊಲೀಸ್ ಸಿಬ್ಬಂದಿಯೊಂದಿಗೆ ಮಚ್ಚೆ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ದಾಳಿ ನಡೆಸಲಾಯಿತು.

ಈ ವೇಳೆ ಮಾರ್ಖಂಡೇಯ ನಗರದ ಭರಮಪ್ಪ ಈರಪ್ಪ ಕಾಲೇರಿ (34) ಎಂಬಾತ ತನ್ನ ಸ್ವಂತ ಲಾಭಕ್ಕಾಗಿ ಅಂಕಿ-ಸಂಖ್ಯೆಗಳ ಮೇಲೆ ಹಣ ಪಣಕ್ಕಿಟ್ಟು ಅಕ್ರಮವಾಗಿ ಮಟಕಾ ಆಟ ನಡೆಸುತ್ತಿದ್ದ ಎನ್ನಲಾಗಿದೆ. ಪೊಲೀಸರು ಆತನನ್ನು ವಶಕ್ಕೆ ಪಡೆದು, ₹2,870 ನಗದು ಮತ್ತು ಓಸಿ ಚೀಟಿಗಳನ್ನು ಜಪ್ತಿ ಮಾಡಿದ್ದಾರೆ.

ವಿಚಾರಣೆ ವೇಳೆ ಮಟಕಾ ಆಟದಿಂದ ಸಂಗ್ರಹಿಸಿದ ಹಣವನ್ನು ಮಾರ್ಖಂಡೇಯ ನಗರದ ನಿಂಗಪ್ಪ ತಲ್ಲೂರ ಎಂಬಾತನಿಗೆ ನೀಡುವುದಾಗಿ ಭರಮಪ್ಪ ತಿಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 234/2026ರ ಅಡಿಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 78(3)ರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ಎರಡನೇ ಆರೋಪಿಯ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದು, ತನಿಖೆ ಪ್ರಗತಿಯಲ್ಲಿದೆ.

ಅಕ್ರಮ ಮಟಕಾ ಚಟುವಟಿಕೆ ವಿರುದ್ಧ ಕಾರ್ಯಾಚರಣೆ ನಡೆಸಿದ ಪಿಎಸ್‌ಐ ವಿ.ಡಿ. ಸರನಾಯಿಕ ಹಾಗೂ ಸಿಬ್ಬಂದಿಯ ಕಾರ್ಯವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಮತ್ತು ಡಿಸಿಪಿಗಳು ಶ್ಲಾಘಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button