Kannada NewsKarnataka NewsPolitics

*ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ರಾಜ್ಯ ಸರ್ಕಾರದ್ದು ಇಬ್ಬಗೆ ನೀತಿ*: *ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ: ಸ್ಟಿಂಗ್ ಆಪರೇಶನ್ ಪ್ರಕರಣದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಇಬ್ಬಗೆ ನೀತಿ, ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ಕಿಡಿಕಾರಿದ್ದಾರೆ.

ಹುಬ್ಬಳ್ಳಿಯಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಸ್ಟಿಂಗ್ ಆಪರೇಶನ್ ಪ್ರಕರಣದಲ್ಲಿ ತಮ್ಮ ಪಕ್ಷದವರೇ ಇದ್ದುದರಿಂದ ಕೇವಲ ಶೋಕಾಸ್ ನೋಟಿಸ್ ನೀಡಿ ಕೈ ತೊಳೆದುಕೊಳ್ಳಲು ಯತ್ನಿಸುತ್ತಿದೆ. ಅದೇ ಅನ್ಯ ಪಕ್ಷದವರಾದರೆ ತಕ್ಷಣವೇ ಬಂಧಿಸುತ್ತದೆ ಎಂದು ರಾಜ್ಯ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದರು.

‘ಸ್ಟಿಂಗ್ ಆಪರೇಷನ್’ ಸ್ವಪಕ್ಷದವರದ್ದೇ ಕೈವಾಡವೆಂದು ಯತೀಂದ್ರ ಅವರು ಹೇಳಿದ ಮೇಲೆ ಕಾಂಗ್ರೆಸ್‌ನ ಮಹಿಳಾ ಮುಖಂಡರೊಬ್ಬರಿಗೆ ಪೊಲೀಸರು ಕೇವಲ ಶೋಕಾಸ್ ನೋಟಿಸ್ ನೀಡಿದ್ದಾರೆ. ಅದೇ, ಬೇರೆಯವರಾಗಿದ್ದರೆ ಬಂಧನಕ್ಕೆ ತತ್ ಕ್ಷಣದ ಕ್ರಮವಾಗುತ್ತಿತ್ತು. ಇದು ಕಾಂಗ್ರೆಸ್ ಸರ್ಕಾರದ ಇಬ್ಬಗೆ ನೀತಿಯನ್ನು ಪ್ರದರ್ಶಿಸುತ್ತಿದೆ ಎಂದು ಹೇಳಿದರು.

ಮೊದಲು ಆರೋಪಿ ಬಂಧನವಾಗಲಿ: ಸ್ಟಿಂಗ್ ಆಪರೇಷನ್ ಮೂಲ ಸೂತ್ರಧಾರಿಯನ್ನು ಈ ಸರ್ಕಾರ ಇದುವರೆಗೂ ಬಂಧಿಸಿಲ್ಲ. ವಿಡಿಯೋ ಶೇರ್ ಮಾಡಿದವರನ್ನು ಮಾತ್ರ ಬಂಧಿಸಿದೆ ಎಂದು ಆಕ್ಷೇಪಿಸಿದ ಸಚಿವರು ಮೊದಲು ಆರೋಪಿಯನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ ತೇಜೋವಧೆ ಪ್ಲ್ಯಾನ್ ಯಾರದ್ದು?: ಮಾಜಿ ಸಿಎಂ
ಸಿದ್ದರಾಮಯ್ಯ ಅವರ ತೇಜೋವಧೆಗೆ ಪಕ್ಕಾ ಪ್ಲ್ಯಾನ್ ಮಾಡಿದವರು ಯಾರು? ಎಂದು ಪ್ರಶ್ನಿಸಿದ ಸಚಿವರು, ವೀಡಿಯೋದಲ್ಲಿ ಕಾಣಿಸಿಕೊಂಡ ಮಹಿಳೆಯೂ ಯೂ ಟರ್ನ್ ಹಿಡಿದಂತಿದೆ. ಈಗ ಸೂತ್ರಧಾರಿಗಳು ಹೇಳಿಕೊಟ್ಟಿದ್ದನ್ನು ಹೇಳುತ್ತಿರಬಹುದು. ಆದರೆ, ಕಟ್ಟುಕಥೆ ಹೇಳಿ ಪ್ರಕರಣ ಮುಚ್ಚಿಹಾಕಲು ಸಾಧ್ಯವಿಲ್ಲ. ಸ್ಟಿಂಗ್ ಪ್ರಕರಣದ ಸಮಗ್ರ ಪಾರದರ್ಶಕ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ಆರೆಸ್ಸೆಸ್ ನೆಪದಲ್ಲಿ ದ್ವೇಷದ ರಾಜಕಾರಣ: ರಾಜ್ಯ ಕಾಂಗ್ರೆಸ್ ಸರ್ಕಾರ ಆರೆಸ್ಸೆಸ್ ಪಾಠ ಸಂಚಲನ ನೆಪದಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ ಸಚಿವರು, ಸಿಎಂ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಕುರ್ಚಿ ಅಲಂಕರಿಸುತ್ತಿದ್ದಂತೆ ‘ತಾವು ದ್ವೇಷದ ರಾಜಕಾರಣ ಮಾಡುವುದಿಲ್ಲ’ ಎಂದಿದ್ದರು. ಹಾಗಾದರೆ ಅದೆಲ್ಲಾ ಬರೀ ಭಾಷಣಕ್ಕೆ ಸೀಮಿತವೇ? ಈಗ ಮಾಡುತ್ತಿರುವುದೇನು? ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಕೆಲವು ಕಡೆ ಅನುಮತಿ ನಿರಾಕರಣೆ ಮಾಡುತ್ತಿರುವ ಈ ಸರ್ಕಾರ ಒಂದೆಡೆ ‘ಸಹಿಷ್ಣುತೆ ಪಾಠ ಮಾಡುತ್ತಾ, ಮತ್ತೊಂದೆಡೆ ದ್ವೇಷದ ರಾಜಕಾರಣ ಮಾಸುತ್ತಿದೆ ಎಂದು ತೀವ್ರವಾಗಿ ಖಂಡಿಸಿದರು.

ದೇಶದಲ್ಲಿ ಕಳೆದ 70 ವರ್ಷದಿಂದ ಆರೆಸ್ಸೆಸ್ ಪಥಸಂಚಲನ ನಡೆಯುತ್ತಿದೆ. ಹಾಗಿದ್ದರೂ ನೀತಿ ಸಂಹಿತೆಯ ನೆಪವೊಡ್ಡಿ ಅನೇಕ ಕಡೆ ಅಡ್ಡಿಪಡಿಸುತ್ತಿದ್ದಾರೆ. ಸ್ಟಿಂಗ್ ಪ್ರಕರಣ ಡೈವರ್ಟ್ ಮಾಡಲು ಇದನ್ನೆಲ್ಲಾ ಮಾಡುತ್ತಿದ್ದಾರೆ ಎಂದು ಜೋಶಿ ಕಿಡಿ ಕಾರಿದರು.

ಪಾಕ್ ಆಕ್ರಮಿತ ಕಾಶ್ಮೀರವನ್ನೊಮ್ಮೆ ನೋಡಿ ಬನ್ನಿ: ಪಾಕ್ ಆಕ್ರಮಿತ ಕಾಶ್ಮೀರವನ್ನು ಒಮ್ಮೆ ನೋಡಿ ಬನ್ನಿ. ಆಗ ತಿಳಿಯುತ್ತದೆ ಅಲ್ಲಿನ ಪರಿಸ್ಥಿತಿ ಮತ್ತು ಭಾರತದಲ್ಲಿನ ಸುವ್ಯವಸ್ಥೆ ಏನೆಂಬುದು ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಫಾರೂಕ್ ಅಬ್ದಲ್ಲಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಪ್ರಜಾಪ್ರಭುತ್ವ, ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿದ ವಿಶ್ವದ ಅತ್ಯಂತ ಬಲಿಷ್ಠ ಸಂವಿಧಾನ ಮತ್ತು ಭಾರತೀಯ ಜನರ ಒಳ್ಳೇ ಗುಣಸ್ವಭಾವದಿಂದಾಗಿ ಜಮ್ಮು- ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಇಂದಿಗೂ ಅಧಿಕಾರದಲ್ಲಿದೆ ಎಂಬುದನ್ನು ಮರೆಯಬಾರದು ಎಂದು ಚಾಟಿ ಬೀಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button