Belagavi NewsBelgaum NewsKannada NewsKarnataka News

*ಕಿತ್ತೂರಿಗೆ ಸಿಎಂ ಡಿ.ಕೆ.ಶಿವಕುಮಾರ ಭರ್ಜರಿ ಕೊಡುಗೆ ಘೋಷಣೆ*

ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು: ಕಿತ್ತೂರು ಉತ್ಸವದ ಅಂತಿಮ ದಿನ ಸಮಾರೋಪ ಭಾಷಣ ಮಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಭರ್ಜರಿ ಕೊಡುಗೆ ಘೋಷಿಸಿದ್ದಾರೆ.

ಚನ್ನಮ್ಮ ಫ್ರೀಡಂ ಪಾರ್ಕ್ ನಿರ್ಮಾಣಕ್ಕೆ ಬಜೆಟ್ ನಲ್ಲಿ ₹40 ಕೋಟಿ ಅನುದಾನ

ಸುಮಾರು 40 ಕೋಟಿ ರೂ. ವೆಚ್ಚದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ, ಚೆನ್ನಮ್ಮನ ಇತಿಹಾಸ ಸಾರುವ ಪಾರ್ಕ್ ನಿರ್ಮಾಣಕ್ಕೆ ಯೋಜನೆ ಘೋಷಿಸಿದ್ದಾರೆ. ಶಾಸಕ ಬಾಬಾಸಾಹೇಬ ಪಾಟೀಲ ಮನವಿ ಮೇರೆಗೆ ಈ ಘೋಷಣೆ ಮಾಡಿದ್ದು, ಬರುವ ಬಜೆಟ್ ನಲ್ಲಿ ಅನುದಾನ ನೀಡುವುದಾಗಿ, ಇಂದೇ ಈ ಕುರಿತು ಆದೇಶ ಮಾಡುವುದಾಗಿ ತಿಳಿಸಿದ್ದಾರೆ.

ಜೊತೆಗೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಕಿತ್ತೂರು ಚೆನ್ನಮ್ಮ ಸಾರಿಗೆ ಸಂಸ್ಥೆ ಎಂದು ಹೆಸರಿಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಕಳೆದ ಬೆಳಗಾವಿ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಶೂನ್ಯ ವೇಳೆಯಲ್ಲಿ ಪ್ರಸ್ತಾಪವೆತ್ತಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಕಿತ್ತೂರು ಚೆನ್ನಮ್ಮ ಸಾರಿಗೆ ಸಂಸ್ಥೆ ಎಂದು ಹೆಸರಿಡುವಂತೆ ಆಗ್ರಹಿಸಿದ್ದರು.

ಕಿತ್ತೂರು ಚೆನ್ನಮ್ಮನ ಸಾಧನೆಗಳನ್ನು ಪ್ರಶಸಂಸಿಸಿದ ಸಿಎಂ, ಇದು ಕೇವಲ ಇತಿಹಾಸವಲ್ಲ, ಇದು ಸ್ವಾಭಿಮಾನದ ಸಂಕೇತ ಎಂದು ತಿಳಿಸಿದರು. ಗೃಹಲಕ್ಷ್ಮೀ ಸೇರಿದಂತೆ ಕಾಂಗ್ರೆಸ್ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಪ್ರಸ್ತಾಪಿಸಿದ್ದಲ್ಲದೆ, ಕಿತ್ತೂರು ಕರ್ನಾಟಕದ ಹೋರಾಟದ ಇತಿಹಾಸವನ್ನು ಸ್ಮರಿಸಿದರು. ಮಹಿಳೆಯರು ಉದ್ಯಮಿಗಳಾಗಿ ಬೆಳೆಯಬೇಕು ಎಂದು ಕರೆನೀಡಿದರು.

ಕಾರ್ಯಕ್ರಮದಲ್ಲಿ ಮಡಿವಾಳ ರಾಜಯೋಗೀಂದ್ರ ಸ್ವಾಮಿಗಳು, ಪಾಲಾಕ್ಷ ಮಹಾಸ್ವಾಮಿಗಳು, ನಿಜಗುಣಾನಂದ ಸ್ವಾಮಿಗಳು ಸೇರಿದಂತೆ ವಿವಿಧ ಮಠಾಧೀಶರು, ಸಚಿವರಾದ ರುದ್ರಪ್ಪ ಲಮಾಣಿ, ಎಸ್.ಎಸ್.ಮಲ್ಲಿಕಾರ್ಜುನ, ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಶಾಸಕರಾದ ಬಾಬಾಸಾಹೇಬ ಪಾಟೀಲ, ಚೆನ್ನರಾಜ ಹಟ್ಟಿಹೊಳಿ, ಮಹಾಂತೇಶ ಕೌಜಲಗಿ, ವಿಶ್ವಾಸ ವೈದ್ಯ, ಎನ್.ಎಚ್.ಕೋನರಡ್ಡಿ, ರಾಜು ಸೇಠ್, ಅಶೋಕ ಪಟ್ಟಣ ಮೊದಲಾದವರು ಕಾರ್ಯಕ್ರಮದಲ್ಲಿದ್ದರು.

ಕಿತ್ತೂರು ಕೋಟೆ ಅಭಿವೃದ್ಧಿಗೆ ₹40 ಕೋಟಿ: ಬಜೆಟ್‌ನಲ್ಲಿ ಅನುದಾನ ಘೋಷಿಸುವ ಭರವಸೆ ನೀಡಿದ ಸಿಎಂ ಡಿಕೆ ಶಿವಕುಮಾರ್

ಕಿತ್ತೂರು ಉತ್ಸವದಲ್ಲಿ ಮಹತ್ವದ ಘೋಷಣೆ; ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ‘ಕಿತ್ತೂರು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ’ ಎಂದು ಮರುನಾಮಕರಣ

ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮನ ಶೌರ್ಯ, ಧೈರ್ಯ ಮತ್ತು ಸ್ವಾಭಿಮಾನದ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಕಿತ್ತೂರು ಕೋಟೆಯನ್ನು ಅಭಿವೃದ್ಧಿಪಡಿಸಿ ಪ್ರಮುಖ ಪ್ರವಾಸಿ ತಾಣವನ್ನಾಗಿ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.

ಕಿತ್ತೂರಿನಲ್ಲಿ ನಡೆದ 202ನೇ ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕಿತ್ತೂರಿನ ಸ್ವಾಭಿಮಾನದ ನೆಲಕ್ಕೆ ಮೊದಲ ಬಾರಿಗೆ ಆಗಮಿಸಿರುವುದಾಗಿ ತಿಳಿಸಿದರು. ಕಿತ್ತೂರು ನಾಡಿನ ಇತಿಹಾಸ, ಸಂಸ್ಕೃತಿ ಮತ್ತು ವೀರರಾಣಿ ಚೆನ್ನಮ್ಮನ ಹೋರಾಟದ ಪರಂಪರೆ ಎಲ್ಲರಿಗೂ ಸ್ಫೂರ್ತಿಯಾಗಿದೆ ಎಂದರು.

ಕಿತ್ತೂರು ಕೋಟೆ ಅಭಿವೃದ್ಧಿಗೆ ₹40 ಕೋಟಿ

ಕಿತ್ತೂರು ಕೋಟೆಯನ್ನು ಅಭಿವೃದ್ಧಿಪಡಿಸಿ ಪ್ರವಾಸಿ ಕೇಂದ್ರವನ್ನಾಗಿ ರೂಪಿಸಲು ಶಾಸಕ ಬಾಬಾಸಾಹೇಬ ಪಾಟೀಲರು ₹40 ಕೋಟಿ ಅನುದಾನ ನೀಡುವಂತೆ ಮನವಿ ಮಾಡಿದ್ದಾರೆ. ಈ ಅನುದಾನವನ್ನು ಮುಂಬರುವ ಬಜೆಟ್‌ನಲ್ಲಿ ಸೇರಿಸಿಕೊಳ್ಳಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು.

ವೀರರಾಣಿ ಕಿತ್ತೂರು ಚೆನ್ನಮ್ಮ ಕನ್ನಡ ನಾಡಿನ ಹೆಮ್ಮೆಯ ದಿಟ್ಟ ಹೋರಾಟಗಾರ್ತಿ. ಅವರ ಶೌರ್ಯ ಮತ್ತು ಧೈರ್ಯದ ಕಥೆ ಇಂದಿನ ಯುವಪೀಳಿಗೆಗೂ ಪಾಠವಾಗಬೇಕು. ಕಿತ್ತೂರಿನ ಇತಿಹಾಸವನ್ನು ಉಳಿಸಿ ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ನಮ್ಮ ನಾಡಿನ ಪರಂಪರೆಯನ್ನು ಪರಿಚಯಿಸಬೇಕು ಎಂದು ಹೇಳಿದರು.

ಸಾರಿಗೆ ಸಂಸ್ಥೆಗೆ ಕಿತ್ತೂರು ಹೆಸರು

ಕಿತ್ತೂರಿಗೆ ತಮ್ಮ ಭೇಟಿಯ ಸಂದರ್ಭದಲ್ಲಿ ಕೊಡುಗೆ ನೀಡುವ ಉದ್ದೇಶದಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ‘ಕಿತ್ತೂರು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ’ ಎಂದು ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಘೋಷಿಸಿದರು.

ಇದೇ ವೇಳೆ, ಈ ಭಾಗದ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಚೆನ್ನವೃಷಭೇಂದ್ರ ನೀರಾವರಿ ಯೋಜನೆಗೆ ₹590 ಕೋಟಿ ಅನುದಾನ ನೀಡುವ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸಲು ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು.

ಕಿತ್ತೂರು ಕೋಟೆಯ ಅಭಿವೃದ್ಧಿ, ಪ್ರವಾಸೋದ್ಯಮಕ್ಕೆ ಉತ್ತೇಜನ ಹಾಗೂ ನೀರಾವರಿ ಯೋಜನೆಗಳ ಮೂಲಕ ಈ ಭಾಗದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯನ್ನು ಕಿತ್ತೂರು ರಾಣಿ ಚನ್ನಮ್ಮ ಸಾರಿಗೆ ಸಂಸ್ಥೆ ಎಂದು ಮರುನಾಮಕರಣ: ಸಿಎಂ ಡಿ ಕೆ ಶಿವಕುಮಾರ್

ಚನ್ನಮ್ಮ ಫ್ರೀಡಂ ಪಾರ್ಕ್ ನಿರ್ಮಾಣಕ್ಕೆ ಬಜೆಟ್ ನಲ್ಲಿ ₹40 ಕೋಟಿ ಅನುದಾನ

ಕಿತ್ತೂರಿನ ಅಭಿವೃದ್ಧಿಗೆ ಸುಮಾರು 1 ಸಾವಿರ ಕೋಟಿ ಮೊತ್ತದ ಯೋಜನೆಗಳು

ವೀರ ರಾಣಿ ಚನ್ನಮ್ಮ ಸಾಹಸ ನಮ್ಮೆಲ್ಲರ ಸ್ಫೂರ್ತಿ

“ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯನ್ನು ಕಿತ್ತೂರು ರಾಣಿ ಚನ್ನಮ್ಮ ಸಾರಿಗೆ ಸಂಸ್ಥೆ ಎಂದು ಮರುನಾಮಕರಣ ಮಾಡಲಾಗುವುದು. ಚನ್ನಮ್ಮ ಫ್ರೀಡಂ ಪಾರ್ಕ್ ನಿರ್ಮಾಣಕ್ಕೆ ತಕ್ಷಣವೇ ಆದೇಶ ನೀಡಲಾಗುವುದು. ಶಾಸಕರ ಬೇಡಿಕೆ ಮೇರೆಗೆ ಮುಂದಿನ ಬಜೆಟ್ ನಲ್ಲಿ ₹40 ಕೋಟಿ ಅನುದಾನ ನೀಡಲಾಗುವುದು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಘೋಷಿಸಿದರು.

ಬೆಳಗಾವಿಯ ಕಿತ್ತೂರಿನಲ್ಲಿ ನಡೆದ ಕಿತ್ತೂರು ಉತ್ಸವ ಕಾರ್ಯಕ್ರಮದಲ್ಲಿ ಸಿಎಂ ಡಿ ಕೆ ಶಿವಕುಮಾರ್ ಅವರು ಭಾನುವಾರ ಮಾತನಾಡಿದರು.

“ಶಾಸಕರಾದ ಬಾಬಾಸಾಹೇಬ್ ಪಾಟೀಲ್ ಅವರು ಈ ಕೋಟೆಯಲ್ಲಿ ಇತಿಹಾಸದ ಪುಟ ಬರೆಯಬೇಕು, ಜನ ನನ್ನನ್ನು ಅಭಿಮಾನಪೂರ್ವಕವಾಗಿ ಆಯ್ಕೆ ಮಾಡಿದ್ದು ಸಾಕ್ಷಿ ಗುಡ್ಡೆ ಬಿಟ್ಟು ಹೋಗಬೇಕು ಎಂದು ಬಯಸಿದ್ದಾರೆ. ಮುಂದಿನ ಪೀಳಿಗೆಗೆ ಈ ಕೋಟೆಯನ್ನು ಪ್ರವಾಸಿ ಕೇಂದ್ರ ಆಗಲು ಮನವಿ ಮಾಡಿದರು. ದೇವರು ವರ, ಶಾಪ ನೀಡಲ್ಲ ಅವಕಾಶ ಮಾತ್ರ ನೀಡುತ್ತಾನೆ. ನಮಗೆ ಸಿಕ್ಕ ಸಂದರ್ಭದಲ್ಲಿ ಇಲ್ಲಿಗೆ ಬಂದಿರುವಾಗ ಏನಾದರೂ ಒಂದು ಕೊಡುಗೆ ನೀಡಬೇಕು. ಇತಿಹಾಸ ಉಳಿಸಲು, ನಮ್ಮ ಸರ್ಕಾರ ಇಂತಹ ಕಾರ್ಯಕ್ರಮ ರೂಪಿಸುತ್ತಿದ್ದೇವೆ” ಎಂದು ತಿಳಿಸಿದರು.

“ಜನರ ಧ್ವನಿಗೆ ಸ್ಪಂದಿಸಬೇಕು ಎಂದು ಕೆಲಸ ಮಾಡುತ್ತಿದ್ದಾರೆ. ನಾನು ನೀರಾವರಿ ಸಚಿವನ್ನಾಗಿದ್ದಾಗ ಈ ಭಾಗದ ರೈತರ ಬದುಕಿಗೆ ಚನ್ನಋಷವೇಂದ್ರ ಅವರ ಹೆಸರಲ್ಲಿ ಏತ ನೀರಾವರಿ ಯೋಜನೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ. 520 ಕೋಟಿ ರೂ. ಮೊತ್ತದ ಯೋಜನೆಗೆ ಸರ್ಕಾರ ಚಿಂತನೆ ನಡೆಸಿದೆ” ಎಂದು ಭರವಸೆ ನೀಡಿದರು.

“ಈ ಕ್ಷೇತ್ರದಲ್ಲಿ 100 ಹಾಸಿಗೆಗಳ ಆಸ್ಪತ್ರೆ, 300 ಕೋಟಿ ಮೊತ್ತದ ಲೋಕೋಪಯೋಗಿ ಇಲಾಖೆ ಕಾಮಗಾರಿ ಸೇರಿದಂತೆ ಸುಮಾರು 1 ಸಾವಿರ ಕೋಟಿ ವೆಚ್ಚದ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ” ಎಂದು ವಿವರಿಸಿದರು.

ವೀರ ರಾಣಿ ಚನ್ನಮ್ಮ ಸಾಹಸ ನಮ್ಮೆಲ್ಲರ ಸ್ಫೂರ್ತಿ

“ಕಿತ್ತೂರಿಗೆ ತನ್ನದೇ ಆದ ಇತಿಹಾಸವಿದೆ. ಚನ್ನಮ್ಮ ಕನ್ನಡದ ಮಣ್ಣಿಗಾಗಿ ಮಡಿದ ದಿಟ್ಟ ಹೋರಾಟಗಾರ್ತಿ. ಕಿತ್ತೂರಿನ ಕಥೆ ಚನ್ನಮ್ಮ ಅವರ ಇತಿಹಾಸ ಸಾರುತ್ತದೆ, ಸ್ವಾಭಿಮಾನದ ಮಹಿಮೆ. ರಾಣಿ ಚನ್ನಮ್ಮನ ಧೈರ್ಯ ಪ್ರತಿ ಪೀಳಿಗೆಗೆ ಸ್ವಾಭಿಮಾನದ ಪಾಠ. ಕಿತ್ತೂರು ಎಂದರೆ ವೀರರ ಸಂಕೇತ. ಕಿತ್ತೂರು ಉತ್ಸವ ನಾಡಿನ ಹೆಮ್ಮೆಯ ಸಂಕೇತ. ವೀರ ರಾಣಿ ಚನ್ನಮ್ಮ ಸಾಹಸ ನಮ್ಮೆಲ್ಲರ ಸ್ಫೂರ್ತಿ. ಚನ್ನಮ್ಮ ಅವರ ತ್ಯಾಗದ ನೆನಪು ಅಜರಾಮರ. ನಾಡಿನ ಸಂಸ್ಕೃತಿ. ಚನ್ನಮ್ಮ ಎಂಬುದು ಕೇವಲ ಹೆಸರಲ್ಲ ಸ್ವಾಭಿಮಾನ, ಶೌರ್ಯ, ಸ್ವಾತಂತ್ರ್ಯದ ಸಂಕೇತ” ಎಂದು ಬಣ್ಣಿಸಿದರು.

“ರಾಮಾಯಣದಲ್ಲಿ ರಾಮನಿಗಿಂತ ಸೀತೆಯ ಪಾತ್ರ ದೊಡ್ಡದು. ಸೀತೆಯ ತ್ಯಾಗ ಮಹಿಳೆಯರಿಗೆ ಮಾದರಿ. ಅದೇ ರೀತಿ ಚನ್ನಮ್ಮ ಅವರ ತ್ಯಾಗ, ಶೌರ್ಯ ಮಹಿಳೆಯರಿಗೆ ಮಾದರಿ. ರಾಜ್ಯದಲ್ಲಿ ಶಾಂತಿಯುತ ಉತ್ತಮ ಆಡಳಿತ ನೀಡುತ್ತಿದ್ದೇವೆ. ಈ ಕ್ಷೇತ್ರದ ಶಾಸಕರ ಜೊತೆ ಇಡೀ ಸರ್ಕಾರ ಇದೆ” ಎಂದು ತಿಳಿಸಿದರು.

“ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ಮನೆಗೆ 200 ಯೂನಿಟ್ ವರೆಗೂ ಉಚಿತ ವಿದ್ಯುತ್, ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಗೃಹಲಕ್ಷ್ಮಿ ಯೋಜನೆ ಮೂಲಕ ಬಡ ಕುಟುಂಬದ ಯಜಮಾನಿಯರಿಗೆ ಮಾಸಿಕ 2 ಸಾವಿರ ನೀಡಲಾಗುತ್ತಿದೆ. (ಗೃಹಲಕ್ಷ್ಮಿ ಯೋಜನೆ ಮೂಲಕ 76,950 ಕೋಟಿ ರೂ. ಹಣ ನೀಡಲಾಗಿದೆ). ಅನ್ನಭಾಗ್ಯ, ಯುವನಿಧಿ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲಾಗುತ್ತಿದೆ. ನಿಮ್ಮ ಮನೆಬಾಗಿಲಿಗೆ ಬಂದು ನಿಮ್ಮ ಕಷ್ಟ ಕೇಳಲು ಪ್ರಜಾಸೇವೆ ಇಲಾಖೆ ಆರಂಭಿಸಿದ್ದೇವೆ. ಸುವರ್ಣ ಸೌಧದಲ್ಲಿ ಗಾಂಧೀಜಿ ಪ್ರತಿಮೆ ಅನಾವರಣ ಮಾಡಿದೆವು. ಸಮಾನತೆಯಿಂದ ಬೆಳೆಯಲು, ಪ್ರಜಾಪ್ರಭುತ್ವ ಮೌಲ್ಯ ಎತ್ತಿ ಹಿಡಿಯಲು ಕಾರ್ಯಕ್ರಮ ರೂಪಿಸಿದ್ದೇವೆ” ಎಂದು ವಿವರಿಸಿದರು.

ಕರ್ನಾಟಕದ ನೆಲ ಬಸವಣ್ಣ ಅವರ ಕಾಯಕ, ದಾಸೋಹದ ಸಮಾನತೆ ಸಂದೇಶ ಸಾರಿದೆ

“ಕರ್ನಾಟಕದ ನೆಲ ಬಸವಣ್ಣ ಅವರ ಕಾಯಕ, ದಾಸೋಹದ ಸಮಾನತೆ ಸಂದೇಶವನ್ನು ಜಗತ್ತಿಗೆ ಸಾರಿದೆ. ದ್ವೇಷದಿಂದ ಉತ್ತರ ಸಿಗಲ್ಲ, ಜನರನ್ನು ಪ್ರೀತಿಯಿಂದ ಕಂಡಾಗ ನಮಗೆ ಉತ್ತರ ನೀಡಲು ಸಾಧ್ಯ. ಈ ಸರ್ಕಾರ ನಿಮ್ಮ ಜತೆ ನಿಲ್ಲುತ್ತದೆ. ನಿಮಗಾಗಿ ಅನೇಕ ಕಾರ್ಯಕ್ರಮ ರೂಪಿಸಿದೆ. ನಮ್ಮ ಸರ್ಕಾರ ಅನೇಕ ಬದಲಾವಣೆ ತಂದಿದ್ದು, ನೀವು ಕೊಟ್ಟ ಅವಕಾಶದಲ್ಲಿ ಪ್ರಾಮಾಣಿಕ ಸೇವೆ ಮಾಡುತ್ತಿದ್ದೇವೆ” ಎಂದು ತಿಳಿಸಿದರು.

ಶಾಸಕರಾದ ಬಾಬಸಾಹೇಬ ಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಿತ್ತೂರು ನಾಡಿನಲ್ಲಿ 202ನೇ ವಿಜಯೋತ್ಸವ ಆಚರಿಸಲಾಗುತ್ತಿದೆ. ಈ ನಾಡು ಸ್ವಾಭಿಮಾನದ ನಾಡಾಗಿದೆ. ಚನ್ನಮ್ಮಾಜಿ ಇತಿಹಾಸವನ್ನು ಹೊಸ   ಪೀಳಿಗೆಗೆ ನೀಡುವ ಉದ್ದೇಶದೊಂದಿಗೆ ಅವರ ಇತಿಹಾಸವನ್ನು ಪಠ್ಯಪುಸ್ತಕದಲ್ಲಿ ಅಳವಡಿಸಲು ಮನವಿ ಮಾಡಿದರು. ಚನ್ನಮ್ಮ‌ ಪ್ರೀಡಂ‌ಪಾರ್ಕ ಸ್ಥಾಪನೆಯ ಹೊಸ ಯೋಜನೆಗೆ ಅನುಮೋದನೆ ನೀಡುವುದುರ ಮೂಲಕ ಈ ಭಾಗದಲ್ಲಿ‌ ಪ್ರವಾಸೋದ್ಯಮಕ್ಕೆ ಉತ್ತೇಜನ ಹಾಗೂ ಚನ್ನಮ್ಮಳ ಇತಿಹಾಸ ಪಸರಿಸಲು ಅನುಕೂಲಕ ಮಾಡಿಕೊಡಲು ಕೋರಿದರು.

ಚನ್ನಮ್ಮನ ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮ.ನಿ.ಪ್ರ. ಸ್ವಾಮೀಜಿ ಮಡಿವಾಳ ರಾಜಯೋಗೇಂದ್ರ ಮಹಾಸ್ವಾಮಿಗಳು, ನಿಚ್ಚಣಕಿಯ ಶ್ರೀಗುರು ಮಡಿವಾಳೇಶ್ವರ ಮಠದ ಶ್ರೀ ಮ.ನಿ.ಪ್ರ.ಸ್ವ. ಪಂಚಾಕ್ಷರಿ ಮಹಾಸ್ವಾಮಿಗಳು,  ಕಾದರವಳ್ಳಿ ಸೀಮಿಮಠದ ಡಾ.ಪಾಲಾಕ್ಷ ಶಿವಯೋಗಿಶ್ವರ‌ ಮಹಾಸ್ವಾಮಿ, ಬೈಲೂರು ನಿಷ್ಕಲ ಮಂಟಪದ ನಿಜಗುಣ ತೋಂಟದಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ  ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಗಣಿ ಮತ್ತು ಭೂ ವಿಜ್ಞಾನ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ,  ಸರಕಾರದ ಮುಖ್ಯ ಸಚೇತಕರಾದ ಅಶೋಕ ಪಟ್ಟಣ, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಅಧ್ಯಕ್ಷರಾದ ಮಹಾಂತೇಶ ಕೌಜಲಗಿ, ಶಾಸಕರುಗಳಾದ ಆಸೀಪ್(ರಾಜು) ಸೇಠ, ವಿಶ್ವಾಸ ವೈದ್ಯ, ಎನ್.ಎಚ್. ಕೋನರಡ್ಡಿ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ, ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ ನಿ. ಅಧ್ಯಕ್ಷ ಭರಮಣ್ಣ ಉಪ್ಪಾರ, ರಾಜ್ಯ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷರಾದ ಅಡಿವೇಶ ಇಟಗಿ, ಕಿತ್ತೂರ ಪಟ್ಟಣ ಪಂಚಾಯತ ಅಧ್ಯಕ್ಷರಾದ ಜೈಸಿದ್ರಾಮ್ ಮಾರಿಹಾಳ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷರಾದ ವಿನಯ ನಾವಲಗಟ್ಟಿ, ಮುಖ್ಯಂಮತ್ರಿಗಳ‌ ಆಪ್ತ ಕಾರ್ಯದರ್ಶಿ, ರಾಜೇಂದ್ರ ಕುಮಾರ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಾಮರಾಜನ್.ಕೆ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಉಪವಿಭಾಗಾಧಿಕಾರಿ ಪ್ರವೀಣ ಜೈನ್ ಸೇರಿದಂತೆ ಗಣ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು. ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಸಂತೋಷ‌ ಹಾನಗಲ್ ಸ್ವಾಗತಿಸಿದರು. 

*ರಕ್ತದಾನ- ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲು*

ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಕ ನಮನ ಕಾರ್ಯಕ್ರಮದಲ್ಲಿ  ಬೆಳಗಾವಿ ಜಿಲ್ಲಾ‌ ಪಂಚಾಯತ ವತಿಯಿಂದ ಆಯೋಜಿಸಲಾಗಿದ್ದ ಸ್ವಯಂ‌ ಪ್ರೇರಿತ ರಕ್ತ ದಾನ ಶಿಬಿರದಲ್ಲಿ ಒಂದೇ‌ ದಿನದಲ್ಲಿ 4634 ಯುನಿಟ್ ರಕ್ತ ಸಂಗ್ರಹಣೆ ಮಾಡುವುದರ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ  ದಾಖಲಾಯಿತು.

ಈ ಪ್ರಯುಕ್ತ ಇಂಡಿಯಾ ಬುಕ್ ಆಫ್ ರೆಕಾರ್ಡನ ಅಧಿಕಾರಿಗಳು ಕಿತ್ತೂರು ಉತ್ಸವ-2026ರ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿಗಳ ಮೂಲಕ ಬೆಳಗಾವಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. 

ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ಶಿಂಧೆ ಅವರಿಗೆ ಮುಖ್ಯ ಮಂತ್ರಿಗಳು ಅಭಿನಂದನೆ‌ ಸಲ್ಲಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button