
ಪ್ರಗತಿವಾಹಿನಿ ಸುದ್ದಿ; ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಬೆಂಗಾವಲು ವಾಹನ (ಕಾನ್ವಾಯ್) ಸರಣಿ ಅಪಘಾತಕ್ಕೀಡಾಗಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶದ ಸುಲ್ತಾನ್ಪುರ ಜಿಲ್ಲೆಯ ಹಲಿಯಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಿಲೋಮೀಟರ್ ಸಂಖ್ಯೆ 91ರ ಬಳಿ ಈ ಭೀಕರ ಅಪಘಾತ ಸಂಭವಿಸಿದೆ.
ದೆಹಲಿಯಿಂದ ಲಖನೌ ತಲುಪಿದ್ದ ರಾಹುಲ್ ಗಾಂಧಿ ಅವರು ಅಲ್ಲಿಂದ ಸುಲ್ತಾನ್ಪುರದ ಎಂಪಿ-ಎಮ್ಎಲ್ಎ ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು ರಸ್ತೆ ಮಾರ್ಗವಾಗಿ ತೆರಳುತ್ತಿದ್ದರು. ಈ ವೇಳೆ ಪೂರ್ವಾಂಚಲ ಎಕ್ಸ್ಪ್ರೆಸ್ವೇನಲ್ಲಿ ವೇಗವಾಗಿ ಚಲಿಸುತ್ತಿದ್ದ ಕಾನ್ವಾಯ್ನ ಮುಂಭಾಗದ ವಾಹನವು ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದೆ. ಪರಿಣಾಮ ಹಿಂದಿನಿಂದ ಬರುತ್ತಿದ್ದ ವಾಹನಗಳು ನಿಯಂತ್ರಣ ತಪ್ಪಿ ಒಂದಕ್ಕೊಂದು ಬಲವಾಗಿ ಡಿಕ್ಕಿಯಾಗಿವೆ.
ಸರಣಿ ಅಪಘಾತದಲ್ಲಿ ಒಟ್ಟು 5 ವಾಹನಗಳು ಹಾಗೂ ಒಂದು ಆಂಬ್ಯುಲೆನ್ಸ್ ತೀವ್ರವಾಗಿ ಜಖಂಗೊಂಡಿವೆ. ಅಪಘಾತದ ತೀವ್ರತೆಗೆ ವಾಹನಗಳಲ್ಲಿದ್ದ ಕೆಲವು ಕಾಂಗ್ರೆಸ್ ಕಾರ್ಯಕರ್ತರು, ಪಕ್ಷದ ಪದಾಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ರಾಹುಲ್ ಗಾಂಧಿ ಅವರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




