CrimeFilm & EntertainmentKannada NewsKarnataka NewsLatest

*ಸಲ್ಮಾನ್‌, ಟೈಗರ್‌ ಶ್ರಾಫ್‌ ಅಲ್ಲ: ಬಿಷ್ಣೋಯಿ ಗ್ಯಾಂಗ್‌ನ ಟಾರ್ಗೆಟ್‌ ಆಗಿದ್ದ ಆ ಬಿಟೌನ್‌ ಸೂಪರ್‌ಸ್ಟಾರ್‌ ಯಾರು?*

ಪ್ರಗತಿವಾಹಿನಿ ಸುದ್ದಿ: ಉತ್ತರ ಭಾರತದಲ್ಲಿ ಹೆಚ್ಚು ಸಕ್ರಿಯವಾಗಿದ್ದ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಈಗ ಮುಂಬೈ ಚಿತ್ರರಂಗದ ಗಣ್ಯರನ್ನೂ ಗುರಿಯಾಗಿಸಿಕೊಂಡಿದೆ ಎಂಬ ಆರೋಪ ಕೇಳಿಬಂದಿದೆ. ಸಲ್ಮಾನ್ ಖಾನ್ ನಿವಾಸದ ಮೇಲಿನ ಗುಂಡಿನ ದಾಳಿ, ಬಾಬಾ ಸಿದ್ದೀಕಿ ಹತ್ಯೆ ಹಾಗೂ ಸಿನಿಮಾ ತಾರೆಯರಿಗೆ ಬಂದ ಬೆದರಿಕೆಗಳ ಬೆನ್ನಲ್ಲೇ, ಟೈಗರ್ ಶ್ರಾಫ್ ಕಾರಿನ ಮೇಲಿನ ದಾಳಿ ಮತ್ತಷ್ಟು ಆತಂಕ ಮೂಡಿಸಿದೆ. ಆದರೆ ಈ ದಾಳಿಯ ಹಿಂದಿನ ಉದ್ದೇಶದ ಬಗ್ಗೆ ಪೊಲೀಸರ ತನಿಖೆಯಲ್ಲಿ ಹೊಸ ಸಂಗತಿಗಳು ಬೆಳಕಿಗೆ ಬರುತ್ತಿವೆ.

2026ರ ಅಕ್ಟೋಬರ್ 18ರಂದು ಮುಂಬೈನ ಜುಹು ಪ್ರದೇಶದಲ್ಲಿ ಬಾಲಿವುಡ್ ನಟ ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ ನಡೆದಿತ್ತು. ಫುಟ್ಬಾಲ್ ಆಡಿ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದರು. ಟೈಗರ್ ಶ್ರಾಫ್ ಪ್ರಾಣಾಪಾಯದಿಂದ ಪಾರಾಗಿದ್ದರೂ, ಕಾರಿನ ಚಾಲಕ ಸೇರಿದಂತೆ ಇಬ್ಬರು ಗಾಯಗೊಂಡಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.

ಮುಂಬೈ ಪೊಲೀಸರ ತನಿಖಾ ಮೂಲಗಳ ಪ್ರಕಾರ, ಶೂಟರ್‌ಗಳು ಸುಮಾರು ಒಂದು ತಿಂಗಳ ಕಾಲ ಮುಂಬೈನಲ್ಲಿ ಉಳಿದುಕೊಂಡು ಬಾಲಿವುಡ್‌ನ ಹಲವು ಗಣ್ಯರ ಚಲನವಲನಗಳನ್ನು ಗಮನಿಸಿದ್ದರು. ಅಮೀರ್ ಖಾನ್ ಅವರ ನಿವಾಸದ ಸುತ್ತಮುತ್ತಲೂ ಹಲವು ಬಾರಿ ಪರಿಶೀಲನೆ ನಡೆಸಿದ್ದರು ಎನ್ನಲಾಗಿದೆ. ಆದರೆ ಆಮೀರ್‌ ಹೆಚ್ಚಾಗಿ ಸಿನಿಮಾ ಚಿತ್ರೀಕರಣದಲ್ಲಿ ನಿರತರಾಗಿರುವುದು ಅಥವಾ ಮನೆಯಿಂದ ಹೊರಗೆ ಬಾರದಿರುವುದರಿಂದ ಶೂಟರ್‌ಗಳಿಗೆ ಅವರನ್ನು ತಲುಪಲು ಕಷ್ಟವಾಗುವಂತೆ ಮಾಡಿತ್ತು. ನಂತರ ಟೈಗರ್ ಶ್ರಾಫ್ ಸುಲಭವಾಗಿ ಸಿಗಬಹುದಾದ ಗುರಿ ಎಂದು ಭಾವಿಸಿ ದಾಳಿ ನಡೆಸಲು ನಿರ್ಧರಿಸಿದ್ದರು ಎನ್ನಲಾಗಿದೆ.

ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಮತ್ತು ಸಲ್ಮಾನ್ ಖಾನ್ ನಡುವಿನ ವೈಷಮ್ಯಕ್ಕೆ 1998ರ ಕೃಷ್ಣಮೃಗ ಬೇಟೆ ಪ್ರಕರಣವನ್ನು ಪ್ರಮುಖ ಕಾರಣವೆಂದು ಈ ಹಿಂದೆ ಹೇಳಲಾಗುತ್ತಿತ್ತು. ಆದರೆ ಮುಂಬೈ ಪೊಲೀಸರ ತನಿಖೆಯಲ್ಲಿ ಹಣ ಸಂಪಾದನೆ, ಅಪರಾಧ ಜಾಲದ ಪ್ರಭಾವ ಹೆಚ್ಚಿಸುವುದು ಮತ್ತು ಭಯದ ವಾತಾವರಣ ಸೃಷ್ಟಿಸುವ ಉದ್ದೇಶವೂ ಇರಬಹುದು ಎಂಬ ಆಯಾಮ ಮುನ್ನೆಲೆಗೆ ಬಂದಿದೆ.

ಟೈಗರ್ ಶ್ರಾಫ್ ಮೇಲಿನ ದಾಳಿಗೆ ಸಂಬಂಧಿಸಿದಂತೆ, ಹಣಕಾಸಿನ ಲಾಭ ಪಡೆಯುವುದು, ಪ್ರಭಾವ ಸ್ಥಾಪಿಸುವುದು ಮತ್ತು ಭೀತಿ ಹುಟ್ಟಿಸುವುದು ಪ್ರಮುಖ ಉದ್ದೇಶಗಳಾಗಿರಬಹುದು ಎಂದು ಮುಂಬೈ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಈ ಮೂಲಕ ಚಿತ್ರರಂಗದ ಗಣ್ಯರನ್ನು ಗುರಿಯಾಗಿಸಿಕೊಂಡು ಭಯ ಹುಟ್ಟಿಸಿ ಸುಲಿಗೆಗೆ ದಾರಿ ಮಾಡಿಕೊಳ್ಳುವ ಪ್ರಯತ್ನ ನಡೆದಿದೆಯೇ ಎಂಬ ಅನುಮಾನವೂ ತನಿಖೆಯಲ್ಲಿ ಪರಿಶೀಲನೆಯಲ್ಲಿದೆ.

2021ರಲ್ಲಿ ಬಿಷ್ಣೋಯಿ ಗ್ಯಾಂಗ್‌ಗೆ ಸಂಬಂಧಿಸಿದ ಸಂಘರ್ಷಗಳು ಮತ್ತಷ್ಟು ತೀವ್ರಗೊಂಡಿದ್ದವು. ಗ್ಯಾಂಗ್‌ನೊಂದಿಗೆ ಸಂಪರ್ಕ ಹೊಂದಿದ್ದ ವಿಕ್ರಮ್‌ಜೀತ್ ಸಿಂಗ್ ಮಿಡ್ಡುಖೇಡ ಹತ್ಯೆಯ ಬಳಿಕ, 2022ರಲ್ಲಿ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ನಡೆದಿತ್ತು. ನಂತರ ಗ್ಯಾಂಗ್‌ನ ಹೆಸರು ಹಲವು ಹೈಪ್ರೊಫೈಲ್ ಅಪರಾಧ ಪ್ರಕರಣಗಳಲ್ಲಿ ಕೇಳಿಬಂದಿದೆ. ಇದೀಗ ಮುಂಬೈನಲ್ಲಿ ಸಿನಿಮಾ ತಾರೆಯರ ಮೇಲಿನ ದಾಳಿ ಮತ್ತು ಬೆದರಿಕೆಗಳ ಹಿಂದೆ ಹಣ ಸುಲಿಗೆ ಹಾಗೂ ಪ್ರಭಾವ ವಿಸ್ತರಣೆಯ ಉದ್ದೇಶವಿದೆಯೇ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button