*ಬೆಳಗಾವಿಯಲ್ಲಿ ಯುವಜನೋತ್ಸವ: ಯುವ ಪ್ರತಿಭೆಗಳಿಗೆ ವೇದಿಕೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:ಯುವಜನರಲ್ಲಿನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ 2026-27ನೇ ಸಾಲಿನ ಬೆಳಗಾವಿ ಜಿಲ್ಲಾ ಮಟ್ಟದ ಯುವಜನೋತ್ಸವವನ್ನು ನವೆಂಬರ್ 7ರಂದು ನಗರದ ಭರತೇಶ ಶಿಕ್ಷಣ ಸಂಸ್ಥೆಯ ಜೆ.ಜಿ.ಎನ್.ಡಿ. ಭರತೇಶ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೈ ಭಾರತ ಹಾಗೂ ಭರತೇಶ ಶಿಕ್ಷಣ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಯುವಜನೋತ್ಸವದಲ್ಲಿ 15ರಿಂದ 29 ವರ್ಷದೊಳಗಿನ ಯುವಕ-ಯುವತಿಯರಿಗಾಗಿ ಜನಪದ ನೃತ್ಯ (ಗುಂಪು), ಜನಪದ ಗೀತೆ (ಗುಂಪು), ಚಿತ್ರಕಲೆ (ವೈಯಕ್ತಿಕ), ಬೀದಿ ನಾಟಕ (ಗುಂಪು) ಹಾಗೂ ಕವಿತೆ ಬರೆಯುವ ಸ್ಪರ್ಧೆ (ವೈಯಕ್ತಿಕ) ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಬೆಳಗಾವಿ ಜಿಲ್ಲೆಯ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ 15ರಿಂದ 29 ವರ್ಷದೊಳಗಿನ ಯುವಕ-ಯುವತಿಯರು ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ಆಸಕ್ತರು ನವೆಂಬರ್ 6ರೊಳಗೆ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು.
ನಗದು ಬಹುಮಾನಗಳ ವಿವರ
ಗುಂಪು ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನವಾಗಿ ₹10,000, ದ್ವಿತೀಯ ₹7,000 ಹಾಗೂ ತೃತೀಯ ₹5,000 ನೀಡಲಾಗುವುದು. ವೈಯಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ ₹3,000, ದ್ವಿತೀಯ ₹2,000 ಹಾಗೂ ತೃತೀಯ ₹1,000 ನಗದು ಬಹುಮಾನದೊಂದಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಗುವುದು.
ಸ್ಪರ್ಧಿಗಳಿಗೆ ಉಚಿತ ಪ್ರವೇಶವಿದ್ದು, ಬೆಳಗಾವಿ ಹೊರತುಪಡಿಸಿ ಇತರೆ ತಾಲೂಕುಗಳಿಂದ ಆಗಮಿಸುವ ಸ್ಪರ್ಧಿಗಳಿಗೆ ಪ್ರಯಾಣ ಭತ್ಯೆ ನೀಡಲಾಗುತ್ತದೆ. ಭಾಗವಹಿಸುವ ಎಲ್ಲ ಸ್ಪರ್ಧಿಗಳಿಗೆ ಲಘು ಉಪಾಹಾರದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ಹೆಸರು ನೋಂದಣಿಗಾಗಿ 7411144485, 9380042060 ಮತ್ತು 9620646488 ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ


