CrimeKannada NewsKarnataka NewsLatest

*ರಸ್ತೆ ಗುಂಡಿ ತಪ್ಪಿಸಲು ಹೋಗಿ ಭೀಕರ ಅಪಘಾತ*: *ಡಿ-ಫಾರ್ಮಸಿ ಪದವೀಧರೆ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ರಸ್ತೆ ಗುಂಡಿ ತಪ್ಪಿಸಲು ಹೋಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಯುವತಿ ಮೃತಪಟ್ಟ ಘಟನೆ ನಡೆದಿದೆ. ಯುವತಿಯ ಸಾವಿನಿಂದ ಸ್ಥಳೀಯರಲ್ಲಿ ಆಕ್ರೋಶ ವ್ಯಕ್ತವಾಗಿದೆ.

27 ವರ್ಷದ ಡಿ-ಫಾರ್ಮಸಿ ಪದವೀಧರೆ ಪ್ರೀತಿ ಬಾಳಾಸೋ ಗೌರಾಯಿ ಮೃತ ದುರ್ದೈವಿ. ಪ್ರೀತಿ, ತಮ್ಮ ಸಹೋದರನೊಂದಿಗೆ ದ್ವಿಚಕ್ರ ವಾಹನದಲ್ಲಿ ಜಯಸಿಂಪುರದಲ್ಲಿರುವ ಸಂಬಂಧಿಕರ ಮನೆಗೆ ತೆರಳುತ್ತಿದ್ದರು. ಈ ವೇಳೆ ಅಬ್ದುಲಾಟ್‌ನಿಂದ ಹುನ್ನರಗಿ ಕಡೆಗೆ ಭೂಮಿಪೂಜೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಪ್ರಥಮೇಶ್ ಕಾಂಬಳೆ ಅವರ ದ್ವಿಚಕ್ರ ವಾಹನ ಎದುರಿನಿಂದ ಬಂದು ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಪ್ರೀತಿ ರಸ್ತೆಗೆ ಬಿದ್ದಿದ್ದು, ತಲೆಗೆ ತೀವ್ರ ಗಾಯಗಳಾಗಿವೆ. ತಕ್ಷಣವೇ ಅವರ ಸಹೋದರ ಮತ್ತು ಸ್ಥಳೀಯರು ಗಾಯಗೊಂಡ ಯುವತಿಯನ್ನು ನಿಪ್ಪಾಣಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಪ್ರೀತಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಮತ್ತೊಂದು ದ್ವಿಚಕ್ರ ವಾಹನದಲ್ಲಿದ್ದ ಪ್ರಥಮೇಶ್ ಕಾಂಬಳೆ ಮತ್ತು ಪ್ರೇಮ್ ಕಾಂಬಳೆ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇನ್ನು, ಅಪಘಾತಕ್ಕೆ ರಸ್ತೆಯಲ್ಲಿರುವ ಬೃಹತ್ ಗುಂಡಿಗಳೇ ಕಾರಣ ಎಂದು ಸ್ಥಳೀಯ ನಾಗರಿಕರು ಆರೋಪಿಸಿದ್ದಾರೆ. ಗುಂಡಿಗಳನ್ನು ತಪ್ಪಿಸಲು ವಾಹನ ಸವಾರರು ಪ್ರಯತ್ನಿಸುವಾಗ ಇಂತಹ ಅಪಘಾತಗಳು ಸಂಭವಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಪಘಾತದ ಶಬ್ದ ಕೇಳುತ್ತಿದ್ದಂತೆ ಸುತ್ತಮುತ್ತಲಿನ ಜನರು ಸ್ಥಳಕ್ಕೆ ಧಾವಿಸಿ ನೆರವಿಗೆ ಮುಂದಾಗಿದ್ದರು. ಆದರೆ, ಯುವತಿಯ ಜೀವ ಉಳಿಸಲು ಸಾಧ್ಯವಾಗಲಿಲ್ಲ. ರಸ್ತೆ ಗುಂಡಿಗಳ ಸಮಸ್ಯೆ ಮತ್ತು ಸುರಕ್ಷಿತ ಸಂಚಾರದ ಕುರಿತು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ರಸ್ತೆಯ ದುಸ್ಥಿತಿಯನ್ನು ಸರಿಪಡಿಸಬೇಕೆಂದು ಆಗ್ರಹಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button