*ಯುವಜೋಡಿ ತಿರುಗಾಟಕ್ಕೆ ಆಕ್ಷೇಪ; ಸುಳ್ಳು ಕೇಸಿಗೆ ಮನನೊಂದು ಯುವಕ ಆತ್ಮಹತ್ಯೆ*: *ಠಾಣೆ ಮುಂದೆ ಶವ ಇಟ್ಟು ಪ್ರತಿಭಟನೆ *

ಪ್ರಗತಿವಾಹಿನಿ ಸುದ್ದಿ: ಬೀಚ್ನಲ್ಲಿ ಯುವಜೋಡಿಯ ಓಡಾಟಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯುವಕನ ಸಾವಿಗೆ ಪೊಲೀಸರ ದೌರ್ಜನ್ಯವೇ ಕಾರಣ ಎಂದು ಆರೋಪಿಸಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಲಾಗಿದೆ.
ಮಂಗಳೂರಿನ ಹೊಸಬೆಟ್ಟು ನಿವಾಸಿ ಸೋಮನಾಥ ಆತ್ಮಹತ್ಯೆ ಮಾಡಿಕೊಂಡ ಯುವಕ. ಮಂಗಳವಾರ ಸಂಜೆ ಶವವನ್ನು ಠಾಣೆಯ ಮುಂದೆ ಇಟ್ಟು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಶಾಸಕ ಭರತ್ ಶೆಟ್ಟಿ ಮಧ್ಯಪ್ರವೇಶದ ಬಳಿಕ ಪರಿಸ್ಥಿತಿ ತಿಳಿಗೊಂಡಿದೆ.
ಎರಡು ದಿನಗಳ ಹಿಂದೆ ಕಾಸರಗೋಡಿನ ಯುವಕ ಮತ್ತು ದೆಹಲಿ ಮೂಲದ ಯುವತಿ ಹೊಸಬೆಟ್ಟು ಬಳಿಯ ಮೀನುಗಾರಿಕಾ ಜೆಟ್ಟಿಯಲ್ಲಿ ಇದ್ದಾಗ ಸ್ಥಳೀಯರು ಆಕ್ಷೇಪಿಸಿದ್ದರು. ಈ ವೇಳೆ ಎರಡೂ ಕಡೆಯವರ ನಡುವೆ ವಾಗ್ವಾದ ನಡೆದಿತ್ತು. ಯುವತಿ ನೀಡಿದ ದೂರಿನ ಮೇರೆಗೆ ಸೋಮನಾಥ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಇದರಿಂದ ಮನನೊಂದ ಸೋಮನಾಥ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸೋಮನಾಥ ಆತ್ಮಹತ್ಯೆಗೆ ಪೊಲೀಸರ ದೌರ್ಜನ್ಯವೇ ಕಾರಣ ಎಂದು ಕೆಲ ಸ್ಥಳೀಯರು ಆರೋಪಿಸಿದ್ದಾರೆ. ವಿಚಾರಣೆಗೆ ಕರೆಸಿ ಪೊಲೀಸರು ಕಿರುಕುಳ ನೀಡಿದ್ದಾರೆ ಎಂಬ ಆರೋಪದೊಂದಿಗೆ ಮಂಗಳವಾರ ಸಂಜೆ ದಿಢೀರನೆ ಶವವನ್ನು ಸುರತ್ಕಲ್ ಠಾಣೆ ಮುಂದೆ ತರಲಾಯಿತು. ನೂರಾರು ಸ್ಥಳೀಯ ಮೊಗವೀರ ಯುವಕರು ಜಮಾಯಿಸಿ ಪ್ರತಿಭಟನೆ ನಡೆಸಿದರು. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಠಾಣೆಯ ಮುಂದೆ ಜನರು ಸೇರಿದ್ದರಿಂದ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿ ಟ್ರಾಫಿಕ್ ಸಮಸ್ಯೆ ಎದುರಾಯಿತು.
ಇನ್ನೊಂದೆಡೆ, ಸೋಮನಾಥ ಕುಡಿತದ ಚಟ ಹೊಂದಿದ್ದು, ಅಕ್ಟೋಬರ್ 25ರಂದು ಬೀಚ್ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಯುವಜೋಡಿಯನ್ನು ಪ್ರಶ್ನಿಸಿದ್ದರು ಎನ್ನಲಾಗಿದೆ. ಈ ಸಂಬಂಧ ದೂರು ದಾಖಲಾಗಿದ್ದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾತುಗಳೂ ಕೇಳಿಬಂದಿವೆ.
ಯುವಜೋಡಿಯ ವಿರುದ್ಧವೂ ದೂರು ದಾಖಲಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದರು. ರಾತ್ರಿ ವೇಳೆ ಬೀಚ್ಗಳಲ್ಲಿ ಮಾದಕ ವಸ್ತುಗಳ ಸೇವನೆ ಮತ್ತು ಅಸಭ್ಯ ವರ್ತನೆ ನಡೆಯುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಹೆಚ್ಚುವರಿ ಪೊಲೀಸ್ ಭದ್ರತೆ ಒದಗಿಸುವಂತೆ ಆಗ್ರಹಿಸಿದರು.
ಸ್ಥಳಕ್ಕೆ ಆಗಮಿಸಿದ ಶಾಸಕ ಭರತ್ ಶೆಟ್ಟಿ ಸಾರ್ವಜನಿಕರು ಹಾಗೂ ಪೊಲೀಸರೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಎರಡೂ ಕಡೆಯಿಂದ ದೂರು ಸ್ವೀಕರಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಯುವಜೋಡಿಯ ವಿರುದ್ಧವೂ ದೂರು ನೀಡಿದರೆ ಪ್ರಕರಣ ದಾಖಲಿಸುವುದಾಗಿ ಪೊಲೀಸರು ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ಶವವನ್ನು ತೆಗೆದುಕೊಂಡು ತೆರಳಿದರು. ರಾತ್ರಿ 9 ಗಂಟೆಯ ವೇಳೆಗೆ ಸಂಚಾರ ಸಹಜ ಸ್ಥಿತಿಗೆ ಮರಳಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




