*“ಏನ್ ತನಿಖೆ ಮಾಡ್ತಿದ್ದೀರಾ?”*: *ಸಿಸಿಬಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ*

ಪ್ರಗತಿವಾಹಿನಿ ಸುದ್ದಿ: ತಮ್ಮ ವಿರುದ್ಧ ನಡೆದಿದೆ ಎನ್ನಲಾದ ನಕಲಿ ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆ ಮಂದಗತಿಯಲ್ಲಿ ಸಾಗುತ್ತಿದೆ ಎಂಬ ಅಸಮಾಧಾನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ವ್ಯಕ್ತವಾಗಿದೆ. ಪ್ರಕರಣದ ಪ್ರಗತಿ ವರದಿ ನೀಡಲು ಬಂದ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಪ್ರಮುಖ ಆರೋಪಿಗಳನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾದ ದಿನದಿಂದಲೂ ಸಿದ್ದರಾಮಯ್ಯ ತನಿಖೆಯ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಎಂದಿನಂತೆ ನಿನ್ನೆ ಕೂಡ ತನಿಖೆಯ ಪ್ರಗತಿ ವರದಿ ನೀಡಲು ಸಿಸಿಬಿ ಅಧಿಕಾರಿಗಳ ತಂಡ ಭೇಟಿ ನೀಡಿತ್ತು. ಈ ವೇಳೆ ತನಿಖೆಯ ವೇಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಅಧಿಕಾರಿಗಳಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
“ಏನು ತನಿಖೆ ಮಾಡುತ್ತಿದ್ದೀರಾ ನೀವು? ಬೆಳಗ್ಗೆ ಯಾರನ್ನೋ ಬಂಧಿಸುತ್ತೀರಾ, ಸಂಜೆ ವೇಳೆಗೆ ಅವರಿಗೆ ಜಾಮೀನು ಸಿಗುತ್ತದೆ. ಯಾವ ರೀತಿಯಲ್ಲಿ ತನಿಖೆ ನಡೆಸುತ್ತಿದ್ದೀರಾ?” ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಪ್ರಕರಣದಲ್ಲಿ ತನಿಖೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಕಳವಳವನ್ನು ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ.
ಪ್ರಕರಣ ನಡೆದು ಇಷ್ಟು ದಿನಗಳಾದರೂ ಇದರ ಹಿಂದಿರುವ ಪ್ರಮುಖ ಕಿಂಗ್ಪಿನ್ಗಳನ್ನು ಬಂಧಿಸಿಲ್ಲ ಎಂದು ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದ್ದಾರೆ. ತನಿಖೆಯನ್ನು ಸರಿಯಾದ ದಿಕ್ಕಿನಲ್ಲಿ ನಡೆಸಬೇಕು. ಯಾವುದೇ ಲೋಪವಾಗದಂತೆ ಪ್ರಕರಣದ ಪ್ರಮುಖ ಆರೋಪಿಯನ್ನು ಆದಷ್ಟು ಬೇಗ ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




