Kannada NewsKarnataka NewsLatestPolitics

*ಸ್ಟಿಂಗ್ ಪ್ರಕರಣಕ್ಕೆ ಹೊಸ ತಿರುವು*: *ಕುಮಾರಸ್ವಾಮಿ ದೆಹಲಿ ಕಚೇರಿಯಲ್ಲಿ ಸಿಸಿಬಿ ಪೊಲೀಸರಿಂದ ಮಹಜರ್*

ಪ್ರಗತಿವಾಹಿನಿ ಸುದ್ದಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆ ಇದೀಗ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ದೆಹಲಿ ಗೃಹ ಕಚೇರಿಯವರೆಗೆ ತಲುಪಿದೆ. ಸ್ಟಿಂಗ್ ಆಪರೇಷನ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಲು ನೆರವಾದ ಆರೋಪದ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರ ಅಧಿಕೃತ ಗೃಹ ಕಚೇರಿಯಲ್ಲಿ ಸಿಸಿಬಿ ಸೈಬರ್ ಕ್ರೈಂ ಠಾಣೆ ಪೊಲೀಸರು ಮಹಜರ್ ನಡೆಸಿದ್ದಾರೆ.

ಇತ್ತೀಚೆಗೆ ಸ್ಟಿಂಗ್ ಆಪರೇಷನ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ ಆರೋಪದ ಮೇಲೆ ದೆಹಲಿಯ ರಿತೇಶ್ ಪಾಂಡೆ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ಆತ ನೀಡಿದ ಹೇಳಿಕೆಯ ಆಧಾರದ ಮೇಲೆ ಕುಮಾರಸ್ವಾಮಿ ಅವರ ಸರ್ಕಾರಿ ನಿವಾಸದಲ್ಲಿರುವ ಗೃಹ ಕಚೇರಿಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ರಿತೇಶ್ ಪಾಂಡೆ ಕುಮಾರಸ್ವಾಮಿ ಅವರ ದೆಹಲಿ ಗೃಹ ಕಚೇರಿಯ ಸಾಮಾಜಿಕ ಜಾಲತಾಣ ವಿಭಾಗದಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿ ಕೆಲಸ ಮಾಡುತ್ತಿದ್ದ. ಆತನಿಗೆ ಮಾಸಿಕ 50 ಸಾವಿರ ರೂ. ವೇತನ ನಿಗದಿಯಾಗಿತ್ತು ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಎರಡು ಮೊಬೈಲ್‌ಗಳನ್ನು ಖರೀದಿಸಿ ತರುವಂತೆ ಪ್ರಜ್ವಲ್ ಪ್ರಸಾದ್ ಎಂಬಾತ ರಿತೇಶ್‌ಗೆ 30 ಸಾವಿರ ರೂ. ನೀಡಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಅದರಂತೆ ದೆಹಲಿಯ ಕರೋಲ್‌ಬಾಗ್‌ನಲ್ಲಿ ತಲಾ 15 ಸಾವಿರ ರೂ. ಬೆಲೆಯ ಎರಡು ಮೊಬೈಲ್‌ಗಳನ್ನು ಖರೀದಿಸಿ ರಿತೇಶ್ ತಂದಿದ್ದ. ಇದೇ ಮೊಬೈಲ್‌ಗಳನ್ನು ಬಳಸಿಕೊಂಡು ಸ್ಟಿಂಗ್ ಆಪರೇಷನ್ ವಿಡಿಯೋಗಳನ್ನು ಅಪ್‌ಲೋಡ್ ಮಾಡಲಾಗಿದೆ ಎಂಬ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ. ಅಲ್ಲದೆ, ತನ್ನ ಫೇಸ್‌ಬುಕ್ ಖಾತೆಯಲ್ಲಿಯೂ ರಿತೇಶ್ ಆ ವಿಡಿಯೋಗಳನ್ನು ಹಂಚಿಕೊಂಡಿದ್ದ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಕುಮಾರಸ್ವಾಮಿ ಅವರ ದೆಹಲಿ ಗೃಹ ಕಚೇರಿಗೆ ಕರೆದೊಯ್ದ ಸಿಸಿಬಿ ಪೊಲೀಸರು ಮಹಜರ್ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಬಂಧಿತನಾದ ಮೊದಲ ಆರೋಪಿಯಾಗಿರುವ ರಿತೇಶ್ ಪಾಂಡೆಯನ್ನು ಕಳೆದ ಶನಿವಾರ ದೆಹಲಿಯಲ್ಲಿ ಬಂಧಿಸಲಾಗಿತ್ತು. ಬಳಿಕ ಸಿಸಿಬಿ ಸೈಬರ್ ಕ್ರೈಂ ಠಾಣೆ ಪೊಲೀಸರು ಆತನನ್ನು ಬೆಂಗಳೂರಿಗೆ ಕರೆತಂದಿದ್ದರು. ನಂತರ ನ್ಯಾಯಾಲಯದಿಂದ ಆತನಿಗೆ ಜಾಮೀನು ದೊರೆತಿತ್ತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button