*ಕೇದಾರನಾಥಕ್ಕೆ ಭೇಟಿ ನೀಡಿದ ಸಾರಾ ಅಲಿ ಖಾನ್ಗೆ ಫತ್ವಾ*: *ಕ್ಷಮೆ ಯಾಚಿಸುವಂತೆ ಮೌಲಾನಾ ಆಗ್ರಹ*

ಪ್ರಗತಿವಾಹಿನಿ ಸುದ್ದಿ: ಬಾಲಿವುಡ್ ನಟಿ ಸಾರಾ ಅಲಿ ಖಾನ್ ಕೇದಾರನಾಥ ದೇವಸ್ಥಾನಕ್ಕೆ ಭೇಟಿ ನೀಡಿರುವ ವಿಚಾರ ಇದೀಗ ವಿವಾದಕ್ಕೆ ಕಾರಣವಾಗಿದೆ. ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಕೇದಾರನಾಥಕ್ಕೆ ಭೇಟಿ ನೀಡುತ್ತಿರುವ ನಟಿಯ ವಿರುದ್ಧ ಉತ್ತರ ಪ್ರದೇಶದ ಇಸ್ಲಾಮಿಕ್ ಧರ್ಮಗುರು ಮೌಲಾನಾ ಮುಫ್ತಿ ಶಹಾಬುದ್ದೀನ್ ರಜ್ವಿ ಬರೇಲ್ವಿ ಫತ್ವಾ ಹೊರಡಿಸಿದ್ದಾರೆ.
ಹಿಂದೂ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿರುವುದು ಶರಿಯಾ ಕಾನೂನಿನ ಪ್ರಕಾರ ಅನುಮತಿಸದ ಕೃತ್ಯ ಎಂದು ಹೇಳಿರುವ ಮೌಲಾನಾ, ಸಾರಾ ಅಲ್ಲಾಹನ ಕ್ಷಮೆ ಯಾಚಿಸಿ ಪಶ್ಚಾತ್ತಾಪ ಪಡಬೇಕು ಎಂದು ಆಗ್ರಹಿಸಿದ್ದಾರೆ.
ಇತ್ತೀಚೆಗೆ ಸಾರಾ ಅಲಿ ಖಾನ್ ಕೇದಾರನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಅಕ್ಟೋಬರ್ 25ರಂದು ದೇವಸ್ಥಾನಕ್ಕೆ ತೆರಳಿದ್ದ ಸಾರಾ, ಕೊರೆಯುವ ಚಳಿಯ ನಡುವೆಯೂ ದರ್ಶನಕ್ಕಾಗಿ ಭಕ್ತರ ಸಾಲಿನಲ್ಲಿ ನಿಂತಿದ್ದರು. ಈ ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ ಮೌಲಾನಾ ಅವರಿಂದ ಫತ್ವಾ ಹೊರಬಿದ್ದಿದೆ.
ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ಮೌಲಾನಾ, ಸಾರಾ ಅಲಿ ಖಾನ್ ಕೇದಾರನಾಥ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿರುವುದು ಶರಿಯಾ ಕಾನೂನಿನ ಅಡಿಯಲ್ಲಿ ತಪ್ಪು ಎಂದು ಹೇಳಿದ್ದಾರೆ. ಬೇರೆ ಧರ್ಮದ ಪೂಜಾ ವಿಧಾನದಲ್ಲಿ ಭಾಗವಹಿಸುವುದು ಇಸ್ಲಾಂ ಧರ್ಮದ ಪ್ರಕಾರ ಹರಾಮ್ ಎಂದು ಪ್ರತಿಪಾದಿಸಿದ್ದಾರೆ. ಸಾರಾ ತಮ್ಮ ಕೃತ್ಯಗಳಿಗಾಗಿ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ದೇವರ ಮುಂದೆ ತಪ್ಪಿತಸ್ಥರಾಗುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.
ಸಾರಾ ಅವರ ದೇವಸ್ಥಾನ ಭೇಟಿಗೆ ಸಂಬಂಧಿಸಿದಂತೆ ಹಲವು ಯುವಕರು ತಮ್ಮಲ್ಲಿ ಪ್ರಶ್ನೆ ಕೇಳಿದ್ದಾರೆ. ಶರಿಯಾ ಕಾನೂನಿನ ಪ್ರಕಾರ ಇಂತಹ ಕಾರ್ಯಗಳಿಗೆ ಅನುಮತಿ ಇಲ್ಲ ಎಂದು ಸ್ಪಷ್ಟಪಡಿಸಿರುವುದಾಗಿ ಮೌಲಾನಾ ವಿಡಿಯೋದಲ್ಲಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಬದರಿನಾಥ-ಕೇದಾರನಾಥ ದೇವಸ್ಥಾನ ಸಮಿತಿ (BKTC) ಇತ್ತೀಚೆಗೆ ಹಿಂದೂಯೇತರ ಸಂದರ್ಶಕರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಅಫಿಡವಿಟ್ ಸಲ್ಲಿಸುವುದನ್ನು ಕಡ್ಡಾಯಗೊಳಿಸಿರುವ ವಿಚಾರವೂ ಚರ್ಚೆಗೆ ಬಂದಿದೆ. ಆದರೆ, ಸಾರಾ ಅವರ ತಂಡ ದೇವಸ್ಥಾನ ಭೇಟಿಗೂ ಮುನ್ನ ಅಗತ್ಯ ಅಫಿಡವಿಟ್ ಸಲ್ಲಿಸಿದೆ ಎಂದು ಸಮಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೋಹನ್ ಸಿಂಗ್ ರೇಂಜರ್ ತಿಳಿಸಿದ್ದಾರೆ ಎನ್ನಲಾಗಿದೆ.
ಸಾರಾ ಅಲಿ ಖಾನ್ ಕೇದಾರನಾಥದೊಂದಿಗೆ ವಿಶೇಷ ನಂಟು ಹೊಂದಿದ್ದಾರೆ. ಅವರ ಮೊದಲ ಚಿತ್ರವಾದ ‘ಕೇದಾರನಾಥ’ದಲ್ಲಿ ಸುಶಾಂತ್ ಸಿಂಗ್ ರಜಪೂತ್ ಜೊತೆ ನಟಿಸಿದ್ದರು. ಅಭಿಷೇಕ್ ಕಪೂರ್ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಉತ್ತರಾಖಂಡದ ಕೇದಾರನಾಥ ಧಾಮ್ ಹಾಗೂ ಗೌರಿಕುಂಡ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದಿತ್ತು. ಅಂದಿನಿಂದಲೂ ಸಾರಾ ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್ಗಳಲ್ಲಿ ಕೇದಾರನಾಥದ ಮೇಲಿನ ಭಕ್ತಿ ಮತ್ತು ಅಭಿಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



