Belagavi NewsBelgaum NewsCrimeKannada NewsKarnataka News

*ಬೆಳಗಾವಿಯಲ್ಲಿ ಗೃಹಿಣಿ ಅನುಮಾನಾಸ್ಪದ ಸಾವು; ಸ್ನೇಹಿತನ ವಿರುದ್ಧ ಕೊಲೆ ಆರೋಪ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪತಿ ಉದ್ಯೋಗಕ್ಕಾಗಿ ವಿದೇಶದಲ್ಲಿರುವ ಸಂದರ್ಭದಲ್ಲೇ 33 ವರ್ಷದ ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಳಗಾವಿ ನಗರದ ಆನಂದನಗರದಲ್ಲಿ ನಡೆದಿದೆ.

ಪುನಂ ಅಮಿತ್ ಡೇಳೇಕರ್ (33) ಮೃತಪಟ್ಟ ಮಹಿಳೆ. ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಆರೋಪಿಸಿರುವ ಮೃತಳ ಕುಟುಂಬಸ್ಥರು, ಆಕೆಯ ಸ್ನೇಹಿತ ರಂಜನ್ ಮರ್ವೆ ವಿರುದ್ಧ ಗಂಭೀರ ಅನುಮಾನ ವ್ಯಕ್ತಪಡಿಸಿದ್ದಾರೆ.

ಪುನಂ ಅವರ ಪತಿ ಉದ್ಯೋಗದ ನಿಮಿತ್ತ ಕುವೈತ್‌ನಲ್ಲಿ ನೆಲೆಸಿದ್ದು, ಪುನಂ ಬೆಳಗಾವಿಯಲ್ಲಿ ವಾಸವಾಗಿದ್ದರು. ಖಾಸಗಿ ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅವರಿಗೆ ಕಳೆದ ಕೆಲವು ವರ್ಷಗಳಿಂದ ರಂಜನ್ ಮರ್ವೆ ಎಂಬಾತನ ಪರಿಚಯವಿತ್ತು ಎನ್ನಲಾಗಿದೆ. ಆತನ ಕಾರಣದಿಂದಲೇ ಪುನಂ ಸ್ವಂತ ಮನೆಯನ್ನು ತೊರೆದು ಬಾಡಿಗೆ ಮನೆಯಲ್ಲಿ ವಾಸವಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಮಧ್ಯರಾತ್ರಿ ಕರೆ ಮಾಡಿ ಆತ್ಮಹತ್ಯೆ ಸುದ್ದಿ!

ಅಕ್ಟೋಬರ್ 30ರ ಮಧ್ಯರಾತ್ರಿ ಸುಮಾರು 2 ಗಂಟೆಗೆ ರಂಜನ್ ಮರ್ವೆ, ಪುನಂ ಅವರ ಕುಟುಂಬಸ್ಥರಿಗೆ ಕರೆ ಮಾಡಿ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ. ವಿಷಯ ತಿಳಿದ ಕುಟುಂಬಸ್ಥರು ಸ್ಥಳಕ್ಕೆ ಧಾವಿಸಿದಾಗ ಪುನಂ ಅವರ ಮೃತದೇಹ ಮಂಚದ ಮೇಲೆ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಮೃತದೇಹ ಪತ್ತೆಯಾದ ಸ್ಥಿತಿ ಹಾಗೂ ಘಟನೆಯ ಸಂದರ್ಭ ಕುಟುಂಬಸ್ಥರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ. ಪುನಂ ಆತ್ಮಹತ್ಯೆ ಮಾಡಿಕೊಂಡಿಲ್ಲ. ರಂಜನ್ ಮರ್ವೆಯೇ ಕೊಲೆ ಮಾಡಿ, ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದ್ದಾನೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ಅಡುಗೆ ಕೋಣೆಯಲ್ಲಿ ಮದ್ಯದ ಬಾಟಲಿ ಪತ್ತೆ!

ಇನ್ನು ಪುನಂ ವಾಸವಿದ್ದ ಮನೆಯ ಅಡುಗೆ ಕೋಣೆಯಲ್ಲಿ ಮದ್ಯದ ಬಾಟಲಿ ಪತ್ತೆಯಾಗಿದೆ ಎನ್ನಲಾಗಿದೆ. ಹೀಗಾಗಿ ಮನೆಯಲ್ಲಿ ಪಾರ್ಟಿ ನಡೆದಿತ್ತೇ? ಈ ವೇಳೆ ಯಾವುದಾದರೂ ವಿಚಾರಕ್ಕೆ ಜಗಳ ನಡೆದು ದುರ್ಘಟನೆ ಸಂಭವಿಸಿತೇ? ಎಂಬ ಅನುಮಾನಗಳನ್ನು ಕುಟುಂಬಸ್ಥರು ವ್ಯಕ್ತಪಡಿಸಿದ್ದಾರೆ. ಆದರೆ ಈ ಆರೋಪಗಳು ಹಾಗೂ ಅನುಮಾನಗಳು ಇನ್ನೂ ದೃಢಪಟ್ಟಿಲ್ಲ.

ಬಿಮ್ಸ್‌ಗೆ ಮೃತದೇಹ ರವಾನೆ

ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಪೊಲೀಸರ ತನಿಖೆಯಿಂದಲೇ ಪುನಂ ಅವರ ಸಾವಿನ ಹಿಂದಿನ ನೈಜ ಕಾರಣ ಬಹಿರಂಗವಾಗಬೇಕಿದೆ.

ಘಟನೆಗೆ ಸಂಬಂಧಿಸಿದಂತೆ ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತನಿಖೆ ನಡೆಯಬೇಕಿದ್ದು, ಕುಟುಂಬಸ್ಥರ ಆರೋಪಗಳ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲ ಆಯಾಮಗಳಿಂದ ಪರಿಶೀಲನೆ ನಡೆಸಬೇಕಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button