
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಿವೃತ್ತ ನ್ಯಾಯಾಧೀಶ, ಹಿರಿಯ ಕವಿ ಜಿನದತ್ತ ದೇಸಾಯಿ ನಿಧನರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು.
ಮೂಲತಃ ಧಾರವಾಡ ಜಿಲ್ಲಾ ಅಮ್ಮಿನಭಾವಿಯವರಾಗಿದ್ದ ಅವರು ಬೆಳಗಾವಿಯ ಮಹಂತೇಶ ನಗರದಲ್ಲಿ ವಾಸವಾಗಿದ್ದರು. ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಅತ್ಯಂತ ಹಿರಿಯ ಸಾಹಿತಿಯಾಗಿದ್ದ ಅವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಪ್ರತಿಷ್ಠಿತ ಮಹಾವೀರ ಪ್ರಶಸ್ತಿ, ಚುಟುಕು ಸಾಹಿತ್ಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ನಿವೃತ್ತಿಯ ನಂತರ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೆಚ್ಚು ಕ್ರಿಯಾಶೀಲರಾಗಿದ್ದರು.
ಬೆಳಗಾವಿ ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷರಾಗಿ, ಮಹೇಶ್ವರಿ ಅಂಧ ಮಕ್ಕಳ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರಾಗಿ ಮೌಲಿಕ ಸೇವೆ ಸಲ್ಲಿಸಿದ್ದರು. ಭರತೇಶ ಶಿಕ್ಷಣ ಮಂಡಳಿಯಲ್ಲಿ ಸಹ ಸೇವೆ ಸಲ್ಲಿಸಿದ್ದರು. ಕುಟುಂಬ ನ್ಯಾಯಾಲಯದ ನ್ಯಾಯಾಧಿಶರಾಗಿ ಸಹ ಅವರು ನಿವೃತ್ತಿ ನಂತರ ಸೇವೆ ಸಲ್ಲಿಸಿದ್ದರು.
ನಿಲಾಂಜನೆ, ಮತ್ತೆ ಬಂದಿದ್ದೇನೆ, ಮಾಗಿ, ಬೊಗಸೆಯಲ್ಲಿ ಬೆಳಕು, ಸಮಗ್ರ ಕಾವ್ಯ ಮೊದಲಾದ ಕವನ ಸಂಕಲನಗಳನ್ನು ಅವರು ಪ್ರಕಟಿಸಿದ್ದರು. ಕನ್ನಡದ ಬಗ್ಗೆ ಅಪಾರ ಕಳಕಳಿ ಹೊಂದಿದ್ದ ಅವರು, ಕನ್ನಡ ರಾಜ್ಯೋತ್ಸವ ದಿನದಂದೆ ನಿಧನರಾಗಿದ್ದು ಕಾಕತಾಳೀಯವೇ ಸರಿ.



