*BREAKING: ಮನೆಯಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳು ಸಾವು*: *ಆಘಾತಗೊಂಡ ಪತಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ: ಮನೆಯಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳು ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿದ್ದು, ಇದನ್ನು ಕಂಡ ಪತಿ ಆಘಾತಕ್ಕೊಳಗಾಗಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ.
ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾತ್ರಿ ಮನೆಯಲ್ಲಿ ತಂದೆ-ತಾಯಿ ಮೂವರು ಮಕ್ಕಳು ಒಂದೇ ಬೆಡ್ ರೂಮ್ ನಲ್ಲಿ ಮಲಗಿದ್ದವರು ಬೆಳಗಾಗುವಷ್ಟರಲ್ಲಿ ತಾಯಿ ಇಬ್ಬರು ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ. ವಿಷಯ ತಿಳಿದ ತಂದೆ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾಯಚೂರು ಜಿಲ್ಲೆಯ ಜಲಾಲನಗರದಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಅರುಣಾ (೪೧), ಮಗ ಶ್ಲೋಕ (೮), ಮಗಳು ಖುಷಿ (೪) ಹಾಗೂ ಪತಿ ವಿಷ್ಣು ಮಲ್ಲೇಶ್ ಎಂದು ಗುರುತಿಸಲಾಗಿದೆ. ಹಿರಿಯ ಮಗ ಸುಹಾಸ್ ಮಾತ್ರ ಜೀವಂತವಾಗಿದ್ದಾನೆ.
ರಾತ್ರಿ ಐವರೂ ಒಂದೇ ಬೆಡ್ ರೂಮ್ ನಲ್ಲಿ ಮಲಗಿದ್ದರು. ಮುಂಜಾನೆ ಎದ್ದು ನೋಡಿದಾಗ ಬೆಡ್ ರೂಮ್ ನಲ್ಲಿ ಯಾರೂ ಇರಲಿಲ್ಲ. ಮತ್ತೊಂದು ಬೆಡ್ ರೂಮ್ ಗೆ ಹೋಗಿ ನೋಡಿದಾಗ ತಾಯಿ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿದ್ದರು. ತಕ್ಷಣ ಸುಹಾಸ್ ತಂದೆ ವಿಷ್ಣುಗೆ ಕರೆ ಮಾಡಿದ್ದಾನೆ. ಮನೆಗೆ ಬಂದು ನೋಡಿದಾಗ ತಾಯಿ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿರುವುದು ಕಂಡು ಶಾಕ್ ಆಗಿದ್ದಾರೆ.
ಮನೆಯಿಂದ ಹೊರ ಹೋದ ವಿಷ್ಣು ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ತಾಯಿ ಹಾಗೂ ಇಬ್ಬರು ಮಕ್ಕಳ ಅನುಮಾನಸ್ಪದ ಸಾವು ಹಾಗೂ ಪತಿ ಆತ್ಮಹತ್ಯೆ ಹಲವು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.




