Kannada NewsKarnataka NewsLatestPolitics

*ವಂದೇ ಮಾತರಂ ಗಾಯನಕ್ಕೆ ಸಿದ್ಧರಾಮಯ್ಯ ಬ್ರೇಕ್*: *5ನೇ ಚರಣದ ವೇಳೆ ಸನ್ನೆ ಮಾಡಿ ನಿಲ್ಲಿಸಿದ ಮಾಜಿ ಸಿಎಂ*

ಪ್ರಗತಿವಾಹಿನಿ ಸುದ್ದಿ: ಕನ್ನಡ ರಾಜ್ಯೋತ್ಸವದ ಸಂಭ್ರಮದ ನಡುವೆ ನವದೆಹಲಿಯ ಕರ್ನಾಟಕ ಭವನದಲ್ಲಿ ವಂದೇ ಮಾತರಂ ಗಾಯನ ವಿಚಾರವಾಗಿ ಕೆಲಕಾಲ ಗೊಂದಲ ಉಂಟಾಗಿದೆ. ರಾಷ್ಟ್ರಗೀತೆಯ ಬಳಿಕ ವಂದೇ ಮಾತರಂ ಗೀತೆಯ ಆರು ಚರಣಗಳನ್ನು ಹಾಡಲು ಗಾಯಕರು ಆರಂಭಿಸಿದ್ದರು. ಈ ವೇಳೆ ವೇದಿಕೆಯಲ್ಲಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗಾಯನ ನಿಲ್ಲಿಸುವಂತೆ ಸನ್ನೆ ಮಾಡಿದ್ದಾರೆ. ಸಿಎಂ ಸೂಚನೆ ನೀಡುತ್ತಿದ್ದಂತೆಯೇ ಸಿಬ್ಬಂದಿ ಹಾಡನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಈ ಘಟನೆ ಇದೀಗ ರಾಜಕೀಯ ವಲಯದಲ್ಲಿ ಮತ್ತೆ ವಂದೇ ಮಾತರಂ ಚರಣಗಳ ವಿವಾದವನ್ನು ಮುನ್ನೆಲೆಗೆ ತಂದಿದೆ.

ಕರ್ನಾಟಕ ಭವನದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು. ಸಿಬ್ಬಂದಿ ಮತ್ತು ಗಾಯಕರು ಆರು ಚರಣಗಳನ್ನು ಹಾಡುತ್ತಿದ್ದಾಗ, ಐದನೇ ಚರಣದ ವೇಳೆಗೆ ಸಿದ್ದರಾಮಯ್ಯ ಮಧ್ಯಪ್ರವೇಶಿಸಿದ್ದಾರೆ. ಕೈಸನ್ನೆ ಮೂಲಕ ಗಾಯನ ನಿಲ್ಲಿಸುವಂತೆ ಸೂಚನೆ ನೀಡಿದ ಬೆನ್ನಲ್ಲೇ ಹಾಡುಗಾರಿಕೆ ಸ್ಥಗಿತಗೊಂಡಿದೆ.

ಇತ್ತೀಚೆಗೆ ಕರ್ನಾಟಕದಲ್ಲಿ ವಂದೇ ಮಾತರಂ ಗೀತೆಯ ಚರಣಗಳ ವಿಚಾರ ರಾಜಕೀಯ ಚರ್ಚೆಗೆ ಕಾರಣವಾಗಿತ್ತು. ರಾಜ್ಯ ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಬೇಕು ಎಂಬ ಆದೇಶ ಹೊರಡಿಸಲಾಗಿದೆ. ವಿಧಾನಮಂಡಲ ಅಧಿವೇಶನದಲ್ಲಿಯೂ ಎರಡು ಚರಣಗಳ ಗಾಯನದ ಬಳಿಕ ಬಿಜೆಪಿ ಶಾಸಕರು ಉಳಿದ ಚರಣಗಳನ್ನು ಹಾಡಿ ಪ್ರತಿಭಟನೆ ನಡೆಸಿದ್ದರು.

ಇದೀಗ ದೆಹಲಿಯ ಕರ್ನಾಟಕ ಭವನದಲ್ಲೂ ಆರು ಚರಣಗಳ ಗಾಯನ ಆರಂಭವಾಗುತ್ತಿದ್ದಂತೆ ಸಿದ್ದರಾಮಯ್ಯ ಅದನ್ನು ತಡೆದಿದ್ದಾರೆ. ಸರ್ಕಾರದ ಆದೇಶವನ್ನು ಪಾಲಿಸುವ ಉದ್ದೇಶದಿಂದಲೇ ಸಿದ್ದರಾಮಯ್ಯ ಮಧ್ಯಪ್ರವೇಶಿಸಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಈ ಘಟನೆಯಿಂದ ರಾಜ್ಯದಲ್ಲಿ ಈಗಾಗಲೇ ರಾಜಕೀಯ ಕಾವು ಪಡೆದುಕೊಂಡಿರುವ ವಂದೇ ಮಾತರಂ ವಿವಾದ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

Related Articles

Back to top button