*ಪಿಂಚಣಿದಾರರಿಗೆ ಸಿಹಿಸುದ್ದಿ: ಮನೆ ಬಾಗಿಲಿಗೇ ಬರಲಿದೆ ಡಿಜಿಟಲ್ ಜೀವನ್ ಪ್ರಮಾಣಪತ್ರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಪಿಂಚಣಿದಾರರು, ಸೈನಿಕ ಪಿಂಚಣಿದಾರರು ಮತ್ತು ಇಪಿಎಫ್‌ಒ ಪಿಂಚಣಿದಾರರಿಗೆ ಅಂಚೆ ಇಲಾಖೆ ಮಹತ್ವದ ಸೌಲಭ್ಯ ಒದಗಿಸಿದೆ. ಇನ್ಮುಂದೆ ವಾರ್ಷಿಕ ಜೀವನ್ ಪ್ರಮಾಣಪತ್ರ ಸಲ್ಲಿಸಲು ಕಚೇರಿಗಳಿಗೆ ಅಲೆದಾಡುವ ಅಗತ್ಯವಿಲ್ಲ. ಅಂಚೆ ಸಿಬ್ಬಂದಿಯೇ ಮನೆ ಬಾಗಿಲಿಗೆ ಬಂದು ಡಿಜಿಟಲ್ ಜೀವನ್ ಪ್ರಮಾಣಪತ್ರ ಸಲ್ಲಿಸುವ ವ್ಯವಸ್ಥೆ ಕಲ್ಪಿಸಿದ್ದಾರೆ.
ಅಂಚೆ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುವ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಮೂಲಕ ಈ ಸೇವೆ ಲಭ್ಯವಿದ್ದು, ಬಯೋಮೆಟ್ರಿಕ್ ದೃಢೀಕರಣ ಅಥವಾ ಫೇಸ್ ಆರ್‌ಡಿ ಆ್ಯಪ್ ಬಳಸಿ ಕೆಲವೇ ನಿಮಿಷಗಳಲ್ಲಿ ಡಿಜಿಟಲ್ ಜೀವನ್ ಪ್ರಮಾಣಪತ್ರ ಸಲ್ಲಿಸಬಹುದು.
ಪಿಂಚಣಿ ಯಾವುದೇ ಅಡೆತಡೆಯಿಲ್ಲದೆ ನಿರಂತರವಾಗಿ ದೊರೆಯಲು ಪ್ರತಿವರ್ಷ ಪಿಂಚಣಿದಾರರು ಜೀವನ್ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ. ಈ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರು ಹಾಗೂ ಇತರ ಪಿಂಚಣಿದಾರರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಅಂಚೆ ಇಲಾಖೆ ಮನೆ ಬಾಗಿಲಿಗೆ ಸೇವೆ ಆರಂಭಿಸಿದೆ.
ಈ ಸೇವೆ ಪಡೆಯಲು ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಪಿಪಿಒ ಸಂಖ್ಯೆ, ಪಿಂಚಣಿ ಖಾತೆಯ ವಿವರಗಳು ಹಾಗೂ ಬಯೋಮೆಟ್ರಿಕ್ ದೃಢೀಕರಣ ಒದಗಿಸಬೇಕು. ಸಾಮಾನ್ಯ ಪಿಂಚಣಿದಾರರಿಗೆ ಕೇವಲ ₹70 ಸೇವಾ ಶುಲ್ಕ ನಿಗದಿಪಡಿಸಲಾಗಿದೆ. ಆದರೆ ಇಪಿಎಫ್‌ಒ ಮತ್ತು ದೂರಸಂಪರ್ಕ ಇಲಾಖೆಯ ಪಿಂಚಣಿದಾರರಿಗೆ ಈ ಸೇವೆ ಸಂಪೂರ್ಣ ಉಚಿತವಾಗಿದೆ.
ಕರ್ನಾಟಕದ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿರುವ 9,700ಕ್ಕೂ ಹೆಚ್ಚು ಅಂಚೆ ಕಚೇರಿಗಳ ಮೂಲಕ 11 ಸಾವಿರಕ್ಕೂ ಅಧಿಕ ಅಂಚೆ ಸಿಬ್ಬಂದಿ ಹಾಗೂ ಗ್ರಾಮೀಣ ಡಾಕ್ ಸೇವಕರು ವಿವಿಧ ಮನೆ ಬಾಗಿಲ ಸೇವೆಗಳನ್ನು ಒದಗಿಸುತ್ತಿದ್ದಾರೆ. ಆಧಾರ್ ಮೊಬೈಲ್ ಸಂಖ್ಯೆ ನವೀಕರಣ, ಐದು ವರ್ಷದೊಳಗಿನ ಮಕ್ಕಳ ಹೊಸ ಆಧಾರ್ ನೋಂದಣಿ, ಎಇಪಿಎಸ್ ಮೂಲಕ ಹಣ ಹಿಂಪಡೆಯುವಿಕೆ ಸೇರಿದಂತೆ ಹಲವು ಸೇವೆಗಳು ಲಭ್ಯವಿವೆ.
ಪಿಂಚಣಿದಾರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಹಾಗೂ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ ಜಂಟಿಯಾಗಿ ವಿಶೇಷ ಅಭಿಯಾನ ಹಮ್ಮಿಕೊಂಡಿವೆ. 2026ರ ನವೆಂಬರ್ 1ರಿಂದ ರಾಜ್ಯದ ಎಲ್ಲಾ ಅಂಚೆ ಕಚೇರಿಗಳಲ್ಲಿ ಡಿಜಿಟಲ್ ಜೀವನ್ ಪ್ರಮಾಣಪತ್ರ ಸಲ್ಲಿಕೆಗಾಗಿ ವಿಶೇಷ ಶಿಬಿರಗಳನ್ನು ಆಯೋಜಿಸಲಾಗಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಪಿಂಚಣಿದಾರರು, ಸೈನಿಕರು, ಇಪಿಎಫ್‌ಒ ಪಿಂಚಣಿದಾರರು ಸೇರಿದಂತೆ ಅರ್ಹ ಫಲಾನುಭವಿಗಳು ತಮ್ಮ ಪ್ರದೇಶದ ಅಂಚೆ ಸಿಬ್ಬಂದಿಯನ್ನು ಸಂಪರ್ಕಿಸಿ ಈ ಮನೆ ಬಾಗಿಲ ಸೇವೆಯ ಸದುಪಯೋಗ ಪಡೆದುಕೊಳ್ಳುವಂತೆ ಬೆಳಗಾವಿ ವಿಭಾಗದ ಹಿರಿಯ ಅಂಚೆ ಅಧೀಕ್ಷಕರು ಹಾಗೂ ಚಿಕ್ಕೋಡಿ ಅಂಚೆ ಕಚೇರಿಗಳ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



