GamesKannada NewsLatestSports

*ಫುಟ್‌ಬಾಲ್ ಪಂದ್ಯದಲ್ಲಿ ದುರಂತ*: *ಗೋಲ್‌ಕೀಪರ್‌ಗೆ ಡಿಕ್ಕಿ ಹೊಡೆದು ಮೈದಾನದಲ್ಲೇ ಸಾವನ್ನಪ್ಪಿದ ಆಟಗಾರ*

ಪ್ರಗತಿವಾಹಿನಿ ಸುದ್ದಿ: ಫುಟ್‌ಬಾಲ್ ಪಂದ್ಯ ನಡೆಯುತ್ತಿದ್ದ ವೇಳೆ ಎದುರಾಳಿ ತಂಡದ ಗೋಲ್‌ಕೀಪರ್‌ಗೆ ಡಿಕ್ಕಿ ಹೊಡೆದು ಮೈದಾನದಲ್ಲೇ ಕುಸಿದುಬಿದ್ದಿದ್ದ 30 ವರ್ಷದ ಸ್ಪೇನ್ ಆಟಗಾರ ಜೀಸಸ್ ಡಿ ಮಿಗುಯೆಲ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ದುರಂತ ಘಟನೆ ಫುಟ್‌ಬಾಲ್ ಅಭಿಮಾನಿಗಳಲ್ಲಿ ತೀವ್ರ ಆಘಾತ ಮೂಡಿಸಿದೆ.

ಸ್ಪ್ಯಾನಿಷ್ ಎರಡನೇ ಡಿವಿಷನ್ ಫುಟ್ಬಾಲ್ ಪಂದ್ಯದ ವೇಳೆ ಈ ದುರಂತ ಸಂಭವಿಸಿದೆ. ಸಿಡಿ ಟೆನೆರಿಫ್ ತಂಡದ ಪರ ಸೆಂಟರ್ ಫಾರ್ವರ್ಡ್ ಆಟಗಾರನಾಗಿ ಆಡುತ್ತಿದ್ದ ಜೀಸಸ್ ಡಿ ಮಿಗುಯೆಲ್, ಎಫ್‌ಸಿ ಅಂಡೋರಾ ವಿರುದ್ಧದ ದ್ವಿತೀಯ ಡಿವಿಷನ್ ಪಂದ್ಯದಲ್ಲಿ ಈ ದುರ್ಘಟನೆಗೆ ಒಳಗಾಗಿದ್ದಾರೆ.

ಪಂದ್ಯದ ಹೆಚ್ಚುವರಿ ಸಮಯದಲ್ಲಿ ಮೈದಾನದ ಮಧ್ಯಭಾಗದ ಸಮೀಪ ಬಂದ ಚೆಂಡನ್ನು ಪಡೆಯಲು ಧಾವಿಸಿದ ಜೀಸಸ್ ಡಿ ಮಿಗುಯೆಲ್, ಎದುರಾಳಿ ತಂಡದ ಗೋಲ್‌ಕೀಪರ್ ಜೀಸಸ್ ಓವೊನೊ ಅವರಿಗೆ ಬಲವಾಗಿ ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ಎದೆಗೆ ತೀವ್ರ ಪೆಟ್ಟು ಬಿದ್ದ ಪರಿಣಾಮ ಅವರು ಮೈದಾನದಲ್ಲೇ ಕುಸಿದುಬಿದ್ದಿದ್ದಾರೆ.

ಘಟನೆ ನಡೆದ ತಕ್ಷಣ ಎರಡೂ ತಂಡಗಳ ವೈದ್ಯಕೀಯ ಸಿಬ್ಬಂದಿ ಧಾವಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಐದು ನಿಮಿಷಕ್ಕೂ ಹೆಚ್ಚು ಕಾಲ ಮೈದಾನದಲ್ಲೇ ತುರ್ತು ಚಿಕಿತ್ಸೆ ನೀಡಿದ ಬಳಿಕ ಆಂಬುಲೆನ್ಸ್ ಮೂಲಕ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಹೃದಯ ಸ್ತಂಭನಕ್ಕೆ ಒಳಗಾಗಿದ್ದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ವೈದ್ಯರ ಸತತ ಪ್ರಯತ್ನದ ನಡುವೆಯೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.

ಈ ಆಘಾತಕಾರಿ ಘಟನೆಯಿಂದಾಗಿ 2-2 ಗೋಲುಗಳಿಂದ ಸಮಬಲದಲ್ಲಿದ್ದ ಪಂದ್ಯವನ್ನು ಅರ್ಧದಲ್ಲೇ ಸ್ಥಗಿತಗೊಳಿಸಲಾಯಿತು.

ನವೆಂಬರ್ 3, 2026ರ ಬೆಳಗ್ಗೆ 8 ಗಂಟೆಗೆ ಜೀಸಸ್ ಡಿ ಮಿಗುಯೆಲ್ ಮೃತಪಟ್ಟಿರುವುದನ್ನು ಸಿಡಿ ಟೆನೆರಿಫ್ ಕ್ಲಬ್ ಅಧಿಕೃತವಾಗಿ ಪ್ರಕಟಿಸಿದೆ. ಆಟಗಾರನ ಅಕಾಲಿಕ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿರುವ ಕ್ಲಬ್, ಅವರ ಕುಟುಂಬದವರು, ಆತ್ಮೀಯರು ಹಾಗೂ ಅಭಿಮಾನಿಗಳ ದುಃಖದಲ್ಲಿ ಭಾಗಿಯಾಗಿರುವುದಾಗಿ ತಿಳಿಸಿದೆ.

ಈ ದುಃಖದ ಸಂದರ್ಭದಲ್ಲಿ ಮೃತ ಆಟಗಾರನ ಕುಟುಂಬದ ಖಾಸಗಿತನವನ್ನು ಗೌರವಿಸುವಂತೆ ಕ್ಲಬ್ ಮನವಿ ಮಾಡಿದೆ. ಕುಟುಂಬದ ಸದಸ್ಯರೂ ತಮಗೆ ಸಾಂತ್ವನ ಹೇಳಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದು, ಕಠಿಣ ಸಮಯದಲ್ಲಿ ಖಾಸಗಿತನ ಕಾಪಾಡುವಂತೆ ಕೋರಿದ್ದಾರೆ.

Related Articles

Back to top button