*ಅಕ್ರಮ ಮಣ್ಣು ಸಾಗಾಟದ ಟಿಪ್ಪರ್‌ಗೆ ಸ್ಕೂಟರ್ ಡಿಕ್ಕಿ*: *ವಿದ್ಯಾರ್ಥಿ ಸಾವು, ಮೂವರ ಬಂಧನ*

ಪ್ರಗತಿವಾಹಿನಿ ಸುದ್ದಿ: ಅಕ್ಟೋಬರ್ 30ರಂದು ಸಂಭವಿಸಿದ್ದ ಭೀಕರ ರಸ್ತೆ ಅಪಘಾತಕ್ಕೆ ಇದೀಗ ದುರಂತ ಅಂತ್ಯ ಸಿಕ್ಕಿದೆ. ಟಿಪ್ಪರ್ ಲಾರಿ ಮತ್ತು ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕಾಲೇಜಿನ ವಿದ್ಯಾರ್ಥಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮತ್ತೊಂದೆಡೆ, ಅಪಘಾತಕ್ಕೆ ಕಾರಣವಾದ ಟಿಪ್ಪರ್ ಪರವಾನಗಿ ಇಲ್ಲದೆ ಮಣ್ಣು ಸಾಗಿಸುತ್ತಿದ್ದ ಸಂಗತಿಯೂ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಮೃತ ವಿದ್ಯಾರ್ಥಿಯನ್ನು ಕುಂದಾಪುರ ತಾಲೂಕಿನ ಕಂಡ್ಲೂರು ನಿವಾಸಿ ಟಿ.ಕೆ. ಮೊಹಮ್ಮದ್ ಶಾಯನ್ ಎಂದು ಗುರುತಿಸಲಾಗಿದೆ. ಅಪಘಾತದ ಬಳಿಕ ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಸ್ಕೂಟರ್‌ನ ಹಿಂಬದಿ ಸವಾರನಾಗಿದ್ದ ಮೊಹಮ್ಮದ್ ರಾಯನ್ ಕೂಡ ಗಾಯಗೊಂಡಿದ್ದರು.
ಕುಂದಾಪುರ ತಾಲೂಕಿನ ಬಳ್ಳೂರು ಗ್ರಾಮದ ವಿಷ್ಣುಮೂರ್ತಿ ದೇವಸ್ಥಾನದ ಸಮೀಪ ರಾಜ್ಯ ಹೆದ್ದಾರಿ 52ರಲ್ಲಿ ಈ ಅಪಘಾತ ಸಂಭವಿಸಿತ್ತು. ಮಣ್ಣು ಸಾಗಿಸುತ್ತಿದ್ದ ಎರಡು ಟಿಪ್ಪರ್ ಲಾರಿಗಳು ಕುಂದಾಪುರ ಕಡೆಯಿಂದ ಬರುತ್ತಿದ್ದವು. ಮುಂದೆ ಸಾಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಿಂದಾಗಿ ಮೊದಲ ಟಿಪ್ಪರ್ ಚಾಲಕ ವೇಗ ಕಡಿಮೆ ಮಾಡಿದ್ದಾನೆ ಎನ್ನಲಾಗಿದೆ. ಈ ವೇಳೆ ಹಿಂಬದಿಯಿಂದ ಬಂದ ಮತ್ತೊಂದು ಟಿಪ್ಪರ್ ಮೊದಲ ಲಾರಿಗೆ ಡಿಕ್ಕಿ ಹೊಡೆದಿದೆ.
ಬಳಿಕ ಎರಡನೇ ಟಿಪ್ಪರ್ ಚಾಲಕ ವಾಹನವನ್ನು ರಸ್ತೆಯ ಬಲಭಾಗಕ್ಕೆ ತಿರುಗಿಸಿದ ಪರಿಣಾಮ, ಕಂಡ್ಲೂರು ಕಡೆಯಿಂದ ಬಸೂರು ಕಡೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳ ಸ್ಕೂಟರ್‌ಗೆ ಡಿಕ್ಕಿಯಾಗಿದೆ. ಪರಿಣಾಮ ಇಬ್ಬರೂ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದರು.
ಇನ್ನು, ಅಪಘಾತಕ್ಕೀಡಾದ ಟಿಪ್ಪರ್ ಅಗತ್ಯ ಪರವಾನಗಿ ಇಲ್ಲದೆ ಮಣ್ಣು ಸಾಗಿಸುತ್ತಿರುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ. ಈ ಸಂಬಂಧ ಇಬ್ಬರು ಟಿಪ್ಪರ್ ಚಾಲಕರಾದ ನಾಗರಾಜ್ ಮತ್ತು ಋತ್ವಿಜ್ ಹಾಗೂ ಮಣ್ಣು ತೆಗೆದ ಜಾಗದ ಮಾಲೀಕ ಅಜಿತ್ ಶೆಟ್ಟಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.



