
ಪ್ರಗತಿವಾಹಿನಿ ಸುದ್ದಿ: ಮಧ್ಯರಾತ್ರಿ ಎಲ್ಲರೂ ನಿದ್ರೆಯಲ್ಲಿದ್ದಾಗ ಮನೆಯ ಸಮೀಪವೇ ಭೀಕರ ದುರಂತ ಸಂಭವಿಸಿದೆ. ಏಕಾಏಕಿ ದಾಳಿ ನಡೆಸಿದ ಚಿರತೆ, 65 ವರ್ಷದ ರೈತನ ಜೀವವನ್ನೇ ಬಲಿ ಪಡೆದಿದೆ. ಈ ಘಟನೆಯಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.
ಮೃತ ರೈತನನ್ನು ರಾಮಚಂದ್ರಪ್ಪ ಎಂದು ಗುರುತಿಸಲಾಗಿದೆ. ಮಧ್ಯರಾತ್ರಿ ಸುಮಾರು 2 ಗಂಟೆಯ ವೇಳೆಗೆ ಮನೆಯ ಬಳಿ ಇದ್ದಾಗ ಚಿರತೆ ದಾಳಿ ನಡೆಸಿದೆ. ದಾಳಿಯ ತೀವ್ರತೆಗೆ ರಾಮಚಂದ್ರಪ್ಪ ಸ್ಥಳದಲ್ಲೇ ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ದೊಡ್ಡಚಲ್ಲೂರು ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಚಿರತೆ ದಾಳಿಯಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕೂಡಲೇ ಚಿರತೆಯನ್ನು ಸೆರೆಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಿದ್ದು, ಈ ಬಗ್ಗೆ ಪರಶುರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.

