*ಹಾಕಿ ದಿಗ್ಗಜ ಸೋಮಯ್ಯ ಮನೆಯಲ್ಲಿ ಕಳ್ಳತನ*: *ಚಿನ್ನದ ಪದಕ, ನಾಣ್ಯ ಸೇರಿ ಬೆಲೆಬಾಳುವ ವಸ್ತುಗಳನ್ನು ದೋಚಿದ ಕಳ್ಳರು*

ಪ್ರಗತಿವಾಹಿನಿ ಸುದ್ದಿ: ಭಾರತದ ಮಾಜಿ ಹಾಕಿ ತಂಡದ ನಾಯಕ ಹಾಗೂ 1980ರ ಮಾಸ್ಕೋ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದ ಖ್ಯಾತ ಕ್ರೀಡಾಪಟು ಎಂ.ಎಂ. ಸೋಮಯ್ಯ ಅವರ ಮನೆಯಲ್ಲಿ ಕಳ್ಳತನವಾಗಿದೆ.
ದೇಶಕ್ಕೆ ಹೆಮ್ಮೆ ತಂದಿದ್ದ ಒಲಿಂಪಿಕ್ಸ್ ಚಿನ್ನದ ಪದಕ, ಏಷ್ಯನ್ ಗೇಮ್ಸ್ ಪದಕಗಳು ಸೇರಿದಂತೆ ಬೆಲೆಬಾಳುವ ಆಭರಣಗಳು ಮತ್ತು ನಗದನ್ನು ಖದೀಮರು ದೋಚಿ ಪರಾರಿಯಾಗಿದ್ದಾರೆ.
ಸೋಮಯ್ಯ ಅವರ ಬೆಂಗಳೂರಿನ ನಿವಾಸದಲ್ಲಿ ಈ ಘಟನೆ ನಡೆದಿದೆ. ಬೆಂಗಳೂರಿನ ಇಂದಿರಾನಗರದ ನ್ಯೂ ತಿಪ್ಪಸಂದ್ರ ವ್ಯಾಪ್ತಿಯಲ್ಲಿ ವಾಸವಿರುವ 67 ವರ್ಷದ ಎಂ.ಎಂ. ಸೋಮಯ್ಯ ಅವರು ತಮ್ಮ ಕುಟುಂಬದೊಂದಿಗೆ ಭಾನುವಾರ (ಅ.25) ಬೆಳಿಗ್ಗೆ 5:00 ಗಂಟೆಗೆ ಕೊಡಗಿಗೆ ತೆರಳಿದ್ದರು.
ಮಂಗಳವಾರ (ಅ.28) ಬೆಳಿಗ್ಗೆ 7:15ರ ಸುಮಾರಿಗೆ ಮನೆಯ ಬಾಗಿಲು ತೆರೆದಿರುವುದನ್ನು ಗಮನಿಸಿದ ನೆರೆಮನೆಯ ನಿವಾಸಿ ನಾರಾಯಣ್ ಅವರು, ಮನೆಯಲ್ಲಿ ಕಳ್ಳತನ ನಡೆದಿರುವ ಬಗ್ಗೆ ಸೋಮಯ್ಯ ಅವರಿಗೆ ಮಾಹಿತಿ ನೀಡಿದ್ದಾರೆ.
ನೆರೆಮನೆಯವರ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಅಕ್ಟೋಬರ್ 28ರ ಬೆಳಗಿನ ಜಾವ ಸುಮಾರು 02:34ರ ಸುಮಾರಿಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಮನೆಗೆ ಪ್ರವೇಶಿಸಿರುವುದು ಕಂಡುಬಂದಿದೆ. ಕಳ್ಳರಲ್ಲಿ ಒಬ್ಬ ನೀಲಿ ಬಣ್ಣದ ಶರ್ಟ್ ಹಾಗೂ ಮತ್ತೊಬ್ಬ ಕೆಂಪು ಬಣ್ಣದ ಶರ್ಟ್ ಧರಿಸಿದ್ದು, ಮನೆಯ ಮುಖ್ಯ ಬಾಗಿಲನ್ನು ಮುರಿದು ಒಳನುಗ್ಗಿ ಕೃತ್ಯ ಎಸಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಎಂ.ಎಂ. ಸೋಮಯ್ಯ ಅವರು ನೀಡಿದ ದೂರಿನ ಮೇರೆಗೆ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಇಬ್ಬರು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಚುರುಕುಗೊಳಿದ್ದಾರೆ.
ಕಳ್ಳತನವಾಗಿರುವ ವಸ್ತುಗಳು:
ಐತಿಹಾಸಿಕ ಕ್ರೀಡಾ ಪದಕಗಳು ಹಾಗೂ ಚಿನ್ನಾಭರಣ ಸೇರಿದಂತೆ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ. 1980ರ ಮಾಸ್ಕೋ ಒಲಿಂಪಿಕ್ಸ್ನಲ್ಲಿ ಭಾರತ ತಂಡ ಗೆದ್ದಿದ್ದ ಐತಿಹಾಸಿಕ ಚಿನ್ನದ ಪದಕ, 1982ರ ನವದೆಹಲಿ ಏಷ್ಯನ್ ಗೇಮ್ಸ್ನಲ್ಲಿ ಗೆದ್ದಿದ್ದ ಬೆಳ್ಳಿ ಪದಕ, 1986ರ ಸಿಯೋಲ್ ಏಷ್ಯನ್ ಗೇಮ್ಸ್ನಲ್ಲಿ ಗೆದ್ದಿದ್ದ ಕಂಚಿನ ಪದಕ, 1982ರ ಆಮ್ಸ್ಟರ್ಡ್ಯಾಮ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಜಯಿಸಿದ್ದ ಕಂಚಿನ ಪದಕ, 8 ಗ್ರಾಂ ತೂಕದ ಚಿನ್ನದ ನಾಣ್ಯ (ಅಂದಾಜು ಮೌಲ್ಯ 1,00,000 ರೂ.), 10 ಗ್ರಾಂ ತೂಕದ ಒಂದು ಚಿನ್ನದ ಬಳೆ (ಅಂದಾಜು ಮೌಲ್ಯ 1,30,000 ರೂ.), 200 ಗ್ರಾಂ ತೂಕದ 6 ಬೆಳ್ಳಿ ಚಮಚಗಳು (ಅಂದಾಜು ಮೌಲ್ಯ 45,000 ರೂ.) ತಲಾ 72 ಗ್ರಾಂ ತೂಕದ 2 ಬೆಳ್ಳಿ ಕಪ್ಗಳು (ಒಟ್ಟು 144 ಗ್ರಾಂ, ಅಂದಾಜು ಮೌಲ್ಯ 30,000 ರೂ.). 80 ಗ್ರಾಂ ತೂಕದ ಒಂದು ಬೆಳ್ಳಿ ಪಾತ್ರೆ (ಅಂದಾಜು ಮೌಲ್ಯ 18,000 ರೂ.), 30,000 ರೂ. ನಗದು ಹಣವನ್ನು ಕದ್ದಿದ್ದಾರೆ.
ಕಳ್ಳತನವಾಗಿರುವ ವಸ್ತುಗಳ ಒಟ್ಟು ಅಂದಾಜು ಮೌಲ್ಯ 3,53,000 ರೂ. ಎಂದು ದೂರುನಲ್ಲಿ ದಾಖಲಿಸಲಾಗಿದೆ.


