CrimeKannada NewsKarnataka NewsLatestNational

*ಪ್ರಯಾಣಿಕ ರೈಲು ಹಾದುಹೋದ 45 ನಿಮಿಷಕ್ಕೆ ಭೀಕರ ಸ್ಫೋಟ*: *ಹಲವು ರೈಲುಗಳ ಸಂಚಾರ ರದ್ದು*

ಪ್ರಗತಿವಾಹಿನಿ ಸುದ್ದಿ: ಪ್ರಯಾಣಿಕ ರೈಲೊಂದು ಹಾದುಹೋದ ಕೆಲವೇ ನಿಮಿಷಗಳಲ್ಲಿ ರೈಲ್ವೆ ಹಳಿಯಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಹಳಿಗಳ ಕೆಳಗಿದ್ದ ಕಾಂಕ್ರೀಟ್ ಬ್ಲಾಕ್‌ಗಳು ನಾಶವಾಗಿದ್ದು, ಸುಮಾರು ಎರಡು ಅಡಿ ಆಳದ ಕುಳಿ ನಿರ್ಮಾಣವಾಗಿದೆ. ಅದೃಷ್ಟವಶಾತ್, ರೈಲು ಸಂಚರಿಸಿದ 45 ನಿಮಿಷಗಳ ಬಳಿಕ ಸ್ಫೋಟ ಸಂಭವಿಸಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಹಲವು ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ.

ಮಂಗಳವಾರ ರಾತ್ರಿ ಸುಮಾರು 9.45ರ ವೇಳೆಗೆ ಅನುಪ್‌ಗಢ-ಸೂರತ್‌ಗಢ ರೈಲು ಮಾರ್ಗದಲ್ಲಿ ಈ ಘಟನೆ ನಡೆದಿದೆ. ಅನುಪ್‌ಗಢದ 50 ಜಿಬಿ ಗ್ರಾಮದ ಸಮೀಪ ಸ್ಫೋಟ ಸಂಭವಿಸಿದ್ದು, ಹಳಿಗಳ ಕೆಳಗಿದ್ದ ಎರಡು ಕಾಂಕ್ರೀಟ್ ಬ್ಲಾಕ್‌ಗಳು ಸಂಪೂರ್ಣ ಹಾನಿಗೊಳಗಾಗಿವೆ. ಈ ಘಟನೆ ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯ ಸಮೀಪ ನಡೆದಿದೆ.

ಸ್ಫೋಟ ಸಂಭವಿಸುವ ಸುಮಾರು 45 ನಿಮಿಷಗಳ ಮೊದಲು ಇದೇ ಮಾರ್ಗದಲ್ಲಿ ಪ್ರಯಾಣಿಕ ರೈಲೊಂದು ಸಂಚರಿಸಿತ್ತು. ರೈಲು ಹಾದುಹೋದ ಬಳಿಕ ಸ್ಫೋಟ ಸಂಭವಿಸಿರುವುದು ಭದ್ರತಾ ಸಂಸ್ಥೆಗಳ ಆತಂಕಕ್ಕೆ ಕಾರಣವಾಗಿದೆ. ರೈಲು ಸಂಚರಿಸುವ ಸಮಯದಲ್ಲೇ ಸ್ಫೋಟ ಸಂಭವಿಸಿದ್ದರೆ ಭಾರೀ ಅನಾಹುತವಾಗುವ ಸಾಧ್ಯತೆಯಿತ್ತು.

ಘಟನೆ ತಿಳಿಯುತ್ತಿದ್ದಂತೆ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್), ಅಪರಾಧ ತನಿಖಾ ಇಲಾಖೆ (ಸಿಐಡಿ), ಶ್ವಾನದಳ, ವಿಧಿವಿಜ್ಞಾನ ಪ್ರಯೋಗಾಲಯದ ತಂಡ ಹಾಗೂ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಫೋಟಕ್ಕೆ ಬಳಸಿದ ವಸ್ತು ಯಾವುದು? ಇದು ಉದ್ದೇಶಪೂರ್ವಕ ಕೃತ್ಯವೇ? ಇದರ ಹಿಂದೆ ಯಾರಾದರೂ ಇದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ವಿಧಿವಿಜ್ಞಾನ ತಂಡಗಳು ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿವೆ.

ಇನ್ನು, ರೈಲ್ವೆ ಹಳಿಯಲ್ಲಿ ಸಂಭವಿಸಿದ ಸ್ಫೋಟ ಬಾಂಬ್ ಸ್ಫೋಟವೇ ಎಂಬುದು ಇನ್ನೂ ಖಚಿತವಾಗಿಲ್ಲ. ತನಿಖೆ ಪೂರ್ಣಗೊಂಡ ಬಳಿಕವಷ್ಟೇ ನಿಖರ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇತ್ತೀಚೆಗೆ ವಶಪಡಿಸಿಕೊಳ್ಳಲಾಗಿದ್ದ 7.5 ಕೆ.ಜಿ. ಆರ್‌ಡಿಎಕ್ಸ್‌ಗೂ ಈ ಘಟನೆಗೂ ಸಂಬಂಧವಿದೆಯೇ ಎಂಬ ಪ್ರಶ್ನೆ ಎದುರಾಗಿತ್ತು. ಆದರೆ, ಎರಡೂ ಘಟನೆಗಳ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಸ್ಫೋಟದ ಹಿನ್ನೆಲೆಯಲ್ಲಿ ಅನುಪ್‌ಗಢ-ಸೂರತ್‌ಗಢ ಮಾರ್ಗದಲ್ಲಿ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಬುಧವಾರ ಬೆಳಗ್ಗೆ 6 ಗಂಟೆಯವರೆಗೆ ಸಂಚರಿಸಬೇಕಿದ್ದ ರೈಲುಗಳನ್ನು ರದ್ದುಗೊಳಿಸಲಾಗಿದೆ. ಹಳಿಗಳ ದುರಸ್ತಿ ಮತ್ತು ಸುರಕ್ಷತಾ ಪರಿಶೀಲನೆ ಪೂರ್ಣಗೊಂಡ ಬಳಿಕ ಸಂಚಾರ ಪುನರಾರಂಭಿಸುವ ನಿರೀಕ್ಷೆಯಿದೆ.

ಇತ್ತೀಚೆಗೆ ರಾಜಸ್ಥಾನದ ಭಿಲ್ವಾರಾದಲ್ಲಿ ಸ್ಫೋಟಕಗಳನ್ನು ಸಾಗಿಸುತ್ತಿದ್ದ ಪಿಕಪ್ ವಾಹನದಲ್ಲಿ ಭಾರೀ ಸ್ಫೋಟ ಸಂಭವಿಸಿ ಚಾಲಕ ಮೃತಪಟ್ಟಿದ್ದ. ಇದರ ಬೆನ್ನಲ್ಲೇ ಗಡಿಭಾಗದ ರೈಲ್ವೆ ಹಳಿಯಲ್ಲಿ ಮತ್ತೊಂದು ಸ್ಫೋಟ ಸಂಭವಿಸಿರುವುದು ಆತಂಕ ಹೆಚ್ಚಿಸಿದೆ. ಆದರೆ, ಈ ಎರಡೂ ಘಟನೆಗಳಿಗೆ ಸಂಬಂಧವಿದೆ ಎಂಬುದಕ್ಕೆ ಸದ್ಯಕ್ಕೆ ಯಾವುದೇ ಪುರಾವೆಗಳಿಲ್ಲ. ಪ್ರತ್ಯೇಕವಾಗಿ ತನಿಖೆ ನಡೆಸಲಾಗುತ್ತಿದೆ.

ಭಾರತ-ಪಾಕಿಸ್ತಾನ ಗಡಿಯ ಸಮೀಪ ಘಟನೆ ನಡೆದಿರುವುದರಿಂದ ಭದ್ರತಾ ಸಂಸ್ಥೆಗಳು ಹೆಚ್ಚಿನ ನಿಗಾ ವಹಿಸಿವೆ. ಸ್ಫೋಟದ ಹಿಂದಿನ ಕಾರಣ ಮತ್ತು ಇದರ ಹಿಂದೆ ಯಾರಾದರೂ ಇದ್ದಾರೆಯೇ ಎಂಬುದು ತನಿಖೆಯಿಂದಷ್ಟೇ ತಿಳಿಯಬೇಕಿದೆ.

Related Articles

Back to top button