*ನಟಿ ದಿಯಾ ಮಿರ್ಜಾ ವಿಡಿಯೋ ಅಳಿಸಿದ ಪಾಲಿಕೆಗೆ ಹೈಕೋರ್ಟ್ ಚಾಟಿ*:*ಮತ್ತೆ ಅಪ್‌ಲೋಡ್ ಮಾಡಲು ಆದೇಶ*

ಪ್ರಗತಿವಾಹಿನಿ ಸುದ್ದಿ: ಪರಿಸರ ಜಾಗೃತಿ ಮೂಡಿಸುವುದಕ್ಕೂ ರಾಜಕೀಯ ಮತ್ತು ಧಾರ್ಮಿಕ ಬಣ್ಣ ಬಳಿಯುವ ಪ್ರಯತ್ನ ನಡೆದಿದೆಯೇ? ಬಾಲಿವುಡ್ ನಟಿ ದಿಯಾ ಮಿರ್ಜಾ ಅವರ ಪಟಾಕಿ ರಹಿತ ದೀಪಾವಳಿ ಆಚರಣೆಯ ಜಾಗೃತಿ ವಿಡಿಯೋ ವಿವಾದಕ್ಕೆ ಬಾಂಬೆ ಹೈಕೋರ್ಟ್ ಮಹತ್ವದ ತಿರುವು ನೀಡಿದೆ. ಭಾರತ ಜಾತ್ಯತೀತ ರಾಷ್ಟ್ರ ಎಂಬುದನ್ನು ನೆನಪಿಸಿರುವ ನ್ಯಾಯಾಲಯ, ರಾಜಕಾರಣಿಗಳ ಕ್ಷುಲ್ಲಕ ವಾಗ್ದಾಳಿಯ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದೆ.
ಪರಿಸರ ಸ್ನೇಹಿ ಹಾಗೂ ಪಟಾಕಿ ರಹಿತ ದೀಪಾವಳಿ ಆಚರಿಸುವಂತೆ ದಿಯಾ ಮಿರ್ಜಾ ಜಾಗೃತಿ ಮೂಡಿಸುವ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದರು. ಮುಂಬೈ ಮಹಾನಗರ ಪಾಲಿಕೆ ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿತ್ತು. ಆದರೆ, ಬಿಜೆಪಿ ಮುಂಬೈ ಘಟಕದ ಅಧ್ಯಕ್ಷ ಅಮಿತ್ ಸತಮ್ ಆಕ್ಷೇಪ ವ್ಯಕ್ತಪಡಿಸಿದ ಬಳಿಕ ಪಾಲಿಕೆ ವಿಡಿಯೋವನ್ನು ತೆಗೆದುಹಾಕಿತ್ತು. ಈ ಕ್ರಮವನ್ನು ಪ್ರಶ್ನಿಸಿದ ನ್ಯಾಯಾಲಯ, ತಕ್ಷಣವೇ ವಿಡಿಯೋವನ್ನು ಮರು-ಅಪ್‌ಲೋಡ್ ಮಾಡುವಂತೆ ಪಾಲಿಕೆಗೆ ಆದೇಶಿಸಿದೆ.
ನ್ಯಾಯಮೂರ್ತಿಗಳಾದ ಗಿರೀಶ್ ಕುಲಕರ್ಣಿ ಮತ್ತು ನೀಲಾ ಗೋಖಲೆ ಅವರನ್ನೊಳಗೊಂಡ ನ್ಯಾಯಪೀಠ, ಪರಿಸರ ಜಾಗೃತಿ ಮೂಡಿಸುವುದು ಹಾಗೂ ವಾಯು ಮತ್ತು ಶಬ್ದ ಮಾಲಿನ್ಯ ತಡೆಯುವ ಸದುದ್ದೇಶದಿಂದ ಮಾಡಲಾದ ವಿಡಿಯೋಗೆ ರಾಜಕೀಯ ಮತ್ತು ಧಾರ್ಮಿಕ ಬಣ್ಣ ಬಳಿದಿರುವುದು ಅತ್ಯಂತ ದುರದೃಷ್ಟಕರ ಎಂದು ಅಭಿಪ್ರಾಯಪಟ್ಟಿದೆ.
ಇನ್ನೊಂದೆಡೆ, ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಈ ವಿಚಾರವಾಗಿ ದಿಯಾ ಮಿರ್ಜಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಿಂದೂ ಹಬ್ಬಗಳ ಸಂದರ್ಭದಲ್ಲಿ ಮಾತ್ರ ಪರಿಸರದ ಬಗ್ಗೆ ಮಾತನಾಡುತ್ತಾರೆ. ಆದರೆ, ಈದ್ ಮತ್ತು ಬಕ್ರೀದ್ ಹಬ್ಬಗಳ ವೇಳೆ ಪ್ರಾಣಿ ಬಲಿಯಿಂದ ನೀರಿನ ಮಾಲಿನ್ಯ ಉಂಟಾದಾಗ ದಿಯಾ ಮಿರ್ಜಾ ಹಾಗೂ ನಾಸಿರುದ್ದೀನ್ ಶಾ ಮಾತನಾಡುವುದಿಲ್ಲ ಎಂದು ಆರೋಪಿಸಿದ್ದಾರೆ.


