Film & EntertainmentKannada NewsKarnataka NewsLatest

*ದರ್ಶನ್ ಬಿಡುಗಡೆಗಾಗಿ ಕರಿಕಲ್ಲಮ್ಮ ದೇವಿಗೆ ವಿಜಯಲಕ್ಷ್ಮಿ ವಿಶೇಷ ಪೂಜೆ*: *ಸಿಕ್ಕಿತಾ ಶುಭ ಸೂಚನೆ?*

ಪ್ರಗತಿವಾಹಿನಿ ಸುದ್ದಿ: ನಟ ದರ್ಶನ್ ಅವರಿಗೆ ಜಾಮೀನು ದೊರೆತು ಶೀಘ್ರದಲ್ಲೇ ಜೈಲಿನಿಂದ ಬಿಡುಗಡೆಯಾಗಲಿ ಎಂದು ಪ್ರಾರ್ಥಿಸಿ ಪತ್ನಿ ವಿಜಯಲಕ್ಷ್ಮಿ ದರ್ಶನ್ ವಿಶೇಷ ಪೂಜೆ ಸಲ್ಲಿಸಿದ್ದಾರೆ. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಚೌಲಿಹಳ್ಳಿ ಗ್ರಾಮದೇವತೆ ಶ್ರೀ ಕರಿಕಲ್ಲಮ್ಮ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದಾರೆ.

ತಿಪಟೂರು ತಾಲೂಕಿನ ಹೊನ್ನವಳ್ಳಿ ಹೋಬಳಿಯ ಚೌಲಿಹಳ್ಳಿ ಗ್ರಾಮದಲ್ಲಿರುವ ದೇವಾಲಯಕ್ಕೆ ತೆರಳಿದ ವಿಜಯಲಕ್ಷ್ಮಿ, ಪತಿಗೆ ಜಾಮೀನು ಸಿಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ದೇವರ ಅಪ್ಪಣೆ ಕೇಳಿದಾಗ ದರ್ಶನ್ ಶೀಘ್ರದಲ್ಲೇ ಜೈಲಿನಿಂದ ಬಿಡುಗಡೆಯಾಗುವ ಸೂಚನೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.

ದರ್ಶನ್ ಬಿಡುಗಡೆಯಾದ ಬಳಿಕ ಪತಿಯೊಂದಿಗೆ ಕುಟುಂಬ ಸಮೇತರಾಗಿ ದೇವಾಲಯಕ್ಕೆ ಬಂದು ಹರಕೆ ತೀರಿಸುವುದಾಗಿ ವಿಜಯಲಕ್ಷ್ಮಿ ಹರಕೆ ಹೊತ್ತಿದ್ದಾರೆ ಎನ್ನಲಾಗಿದೆ.

ನಂತರ ದೇವಾಲಯದ ಧೂತಯ್ಯ ಸ್ವಾಮಿಯ ದರ್ಶನ ಪಡೆದ ವಿಜಯಲಕ್ಷ್ಮಿ ಪ್ರದಕ್ಷಿಣೆ ಹಾಕಿದರು. ಈ ವೇಳೆ ಧೂತಯ್ಯ ಸ್ವಾಮಿ ಕುಟುಂಬಕ್ಕೆ ಅಭಯ ನೀಡಿದ್ದು, ದರ್ಶನ್ ಅವರಿಗೆ ಜಾಮೀನು ಸಿಗುವ ಬಗ್ಗೆ ಅಪ್ಪಣೆ ನೀಡಿದ್ದಾರೆ ಎನ್ನಲಾಗಿದೆ..

ವಿಜಯಲಕ್ಷ್ಮಿ ದೇವಾಲಯಕ್ಕೆ ಭೇಟಿ ನೀಡಿರುವ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ದರ್ಶನ್ ಅಭಿಮಾನಿಗಳು ಚೌಲಿಹಳ್ಳಿಯ ಶ್ರೀ ಕರಿಕಲ್ಲಮ್ಮ ದೇವಾಲಯದ ಬಳಿ ಜಮಾಯಿಸಿದ್ದರು. ದೇವಾಲಯದ ಅರ್ಚಕರು ಮತ್ತು ಸಮಿತಿ ಸದಸ್ಯರು ಪೂಜಾ ಕಾರ್ಯಗಳಿಗೆ ಸಹಕರಿಸಿದರು.

Related Articles

Back to top button