*ಕಾಂಗ್ರೆಸ್ ನಾಯಕರನ್ನು ತುಂಡು ತುಂಡಾಗಿ ಸಮುದ್ರಕ್ಕೆ ಎಸೆಯುತ್ತಾರೆ*: *ಛಲವಾದಿ ನಾರಾಯಣಸ್ವಾಮಿ*

ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಿವಾದಿತ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಅರಾಜಕತೆ ಸೃಷ್ಟಿಸಲು ಮುಂದಾದರೆ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಕಾಂಗ್ರೆಸ್ ನಾಯಕರನ್ನು ತುಂಡು ತುಂಡಾಗಿ ಮಾಡಿ ಅರಬ್ಬಿ ಸಮುದ್ರಕ್ಕೆ ಎಸೆಯುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕೋಲಾರದಲ್ಲಿ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಕಾಂಗ್ರೆಸ್ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಹೊರಟಿದೆ ಎಂದು ಆರೋಪಿಸಿದರು. ಎಸ್ಐಆರ್ ಹೆಸರಿನಲ್ಲಿ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಮುಂದಾಗಿದೆ. ಇದರ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ ಎಂದರು.
ಇನ್ನು, ತಮ್ಮ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಸ್ಪಷ್ಟನೆ ನೀಡಿದ ಛಲವಾದಿ ನಾರಾಯಣಸ್ವಾಮಿ, ಕಾಂಗ್ರೆಸ್ ನಾಯಕರನ್ನು ತುಂಡು ತುಂಡಾಗಿ ಮಾಡಿ ಸಮುದ್ರಕ್ಕೆ ಎಸೆಯುವ ಮಾತನ್ನು ತಾವು ಹೇಳಿಲ್ಲ. ಕಾಂಗ್ರೆಸ್ ಪಕ್ಷವನ್ನೇ ತುಂಡು ತುಂಡಾಗಿ ಮಾಡಿ ಅರಬ್ಬಿ ಸಮುದ್ರಕ್ಕೆ ಎಸೆಯುತ್ತಾರೆ ಎಂದು ಜನ ಹೇಳುತ್ತಿದ್ದಾರೆ ಎಂಬ ಅರ್ಥದಲ್ಲಿ ಮಾತನಾಡಿದ್ದಾಗಿ ಸಮರ್ಥಿಸಿಕೊಂಡಿದ್ದಾರೆ.
ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. ಕನ್ನಡ ರಾಜ್ಯೋತ್ಸವ ನಿತ್ಯೋತ್ಸವವಾಗಬೇಕಿದ್ದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆಯ ನಿತ್ಯೋತ್ಸವ ಮಾಡುತ್ತಿದೆ ಎಂದು ಟೀಕಿಸಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಸ್ಟಿಂಗ್ ಪ್ರಕರಣವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹದ್ದುಬಸ್ತಿನಲ್ಲಿ ಇಡಲು ನಡೆಯುತ್ತಿರುವ ಹುನ್ನಾರ ಎಂದು ಆರೋಪಿಸಿದ್ದಾರೆ.
ಒಟ್ಟಿನಲ್ಲಿ, ಕಾಂಗ್ರೆಸ್ ವಿರುದ್ಧದ ಟೀಕೆಯ ನಡುವೆ ಛಲವಾದಿ ನಾರಾಯಣಸ್ವಾಮಿ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ವಿವಾದಕ್ಕೆ ಕಾರಣವಾಗಿದೆ.



