*ಭೂಮಿಯತ್ತ ಧಾವಿಸುತ್ತಿದೆ ನಾಸಾದ 22 ವರ್ಷ ಹಳೆಯ ಉಪಗ್ರಹ*: *ಬೆಂಗಳೂರಿನ ಮೇಲೂ ಬೀಳುತ್ತಾ ಅವಶೇಷ?*

ಪ್ರಗತಿವಾಹಿನಿ ಸುದ್ದಿ: ಬಾಹ್ಯಾಕಾಶದಿಂದ ಭೂಮಿಯತ್ತ ಮರಳುತ್ತಿರುವ 22 ವರ್ಷ ಹಳೆಯ ಉಪಗ್ರಹವೊಂದು ಕುತೂಹಲದ ಜೊತೆಗೆ ಆತಂಕವನ್ನೂ ಮೂಡಿಸಿದೆ. ನಾಸಾಗೆ ಸೇರಿದ ಈ ಉಪಗ್ರಹದ ಅವಶೇಷಗಳು ಎಲ್ಲಿ ಬೀಳಲಿವೆ ಎಂಬುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ. ನಾಸಾ ಗುರುತಿಸಿರುವ ಸಂಭಾವ್ಯ ವಲಯದಲ್ಲಿ ಬೆಂಗಳೂರು ಸೇರಿದಂತೆ ಭಾರತದ ಹಲವು ಪ್ರಮುಖ ನಗರಗಳು ಸೇರಿವೆ.
ನೀಲ್ ಗೆಹ್ರೆಲ್ಸ್ ಸ್ವಿಫ್ಟ್ ಅಬ್ಸರ್ವೇಟರಿ ಹೆಸರಿನ ಈ ಉಪಗ್ರಹ ಭಾರತೀಯ ಕಾಲಮಾನ ಇಂದು ಮಧ್ಯಾಹ್ನ ಸುಮಾರು 2 ಗಂಟೆಯೊಳಗೆ ಭೂಮಿಯ ವಾತಾವರಣ ಪ್ರವೇಶಿಸುವ ನಿರೀಕ್ಷೆಯಿದೆ. ವಾತಾವರಣ ಪ್ರವೇಶಿಸುವ ವೇಳೆ ಉಂಟಾಗುವ ತೀವ್ರ ಶಾಖದಿಂದ ಉಪಗ್ರಹದ ಬಹುತೇಕ ಭಾಗಗಳು ಸುಟ್ಟು ನಾಶವಾಗುವ ಸಾಧ್ಯತೆಯಿದೆ. ಆದರೆ, ಕೆಲವು ಗಟ್ಟಿಯಾದ ಲೋಹದ ಬಿಡಿಭಾಗಗಳು ಭೂಮಿಯ ಮೇಲ್ಮೈ ತಲುಪಬಹುದು ಎಂದು ಅಂದಾಜಿಸಲಾಗಿದೆ.
ನಾಸಾ ಗುರುತಿಸಿರುವ ಸಂಭಾವ್ಯ ವಲಯದಲ್ಲಿ ಆಫ್ರಿಕಾ, ಆಸ್ಟ್ರೇಲಿಯಾ, ಭಾರತ, ಆಗ್ನೇಯ ಏಷ್ಯಾ ಹಾಗೂ ಮಧ್ಯ ಮತ್ತು ದಕ್ಷಿಣ ಅಮೆರಿಕದ ಕೆಲವು ಭಾಗಗಳು ಸೇರಿವೆ. ಭಾರತದ ಬೆಂಗಳೂರು, ಮುಂಬೈ, ಹೈದರಾಬಾದ್ ಮತ್ತು ಚೆನ್ನೈ ನಗರಗಳೂ ಈ ವ್ಯಾಪ್ತಿಯಲ್ಲಿವೆ. ಆದರೆ, ಈ ನಗರಗಳ ಮೇಲೆಯೇ ಅವಶೇಷಗಳು ಬೀಳುತ್ತವೆ ಎಂದರ್ಥವಲ್ಲ. ನಿಖರವಾದ ಪತನದ ಸ್ಥಳ ಇನ್ನೂ ಸ್ಪಷ್ಟವಾಗಿಲ್ಲ. ಹೆಚ್ಚಿನ ಅವಶೇಷಗಳು ಜನವಸತಿಯಿಲ್ಲದ ಸಮುದ್ರ ಪ್ರದೇಶಕ್ಕೆ ಬೀಳುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.
ಇನ್ನು, ಈ ಉಪಗ್ರಹವನ್ನು 2004ರ ನವೆಂಬರ್ 20ರಂದು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಾಗಿತ್ತು. ಆರಂಭದಲ್ಲಿ ಕೇವಲ ಎರಡು ವರ್ಷಗಳ ಕಾರ್ಯಾಚರಣೆಗೆ ವಿನ್ಯಾಸಗೊಳಿಸಲಾಗಿದ್ದರೂ, ಬರೋಬ್ಬರಿ 22 ವರ್ಷಗಳ ಕಾಲ ಕಾರ್ಯನಿರ್ವಹಿಸಿದೆ. ಸುಮಾರು 1.5 ಟನ್ ತೂಕ ಹೊಂದಿರುವ ಈ ಉಪಗ್ರಹ ಬಾಹ್ಯಾಕಾಶ ಸಂಶೋಧನೆಯಲ್ಲಿ ಮಹತ್ವದ ಕೊಡುಗೆ ನೀಡಿದೆ.
ವಿಶೇಷವಾಗಿ ಬಾಹ್ಯಾಕಾಶದಲ್ಲಿನ ಗಾಮಾ ಕಿರಣಗಳ ಸ್ಫೋಟಗಳ ಅಧ್ಯಯನ ಇದರ ಪ್ರಮುಖ ಉದ್ದೇಶವಾಗಿತ್ತು. ಈವರೆಗೆ 2,000ಕ್ಕೂ ಹೆಚ್ಚು ಗಾಮಾ ಕಿರಣಗಳ ಸ್ಫೋಟಗಳನ್ನು ಅಧ್ಯಯನ ಮಾಡಿದ್ದು, 1,400ಕ್ಕೂ ಹೆಚ್ಚು ಸೂಪರ್ನೋವಾ ಘಟನೆಗಳ ವೀಕ್ಷಣೆಗೆ ಕೊಡುಗೆ ನೀಡಿದೆ.
ಉಪಗ್ರಹದ ಅವಶೇಷಗಳು ಎಲ್ಲಿ ಪತನವಾಗಲಿವೆ ಎಂಬುದು ಅದು ಭೂಮಿಯ ವಾತಾವರಣ ಪ್ರವೇಶಿಸುವ ಕ್ಷಣದಲ್ಲಿ ಅದರ ಕಕ್ಷೆಯ ಸ್ಥಿತಿಯನ್ನು ಅವಲಂಬಿಸಿರುತ್ತದೆ. ಕೆಲವು ತಜ್ಞರ ಪ್ರಕಾರ, ಅವಶೇಷಗಳು ಸಮುದ್ರಕ್ಕೆ ಬೀಳುವ ಸಾಧ್ಯತೆಯಿದೆ. ಸದ್ಯ ನಿಖರವಾದ ಪತನದ ಸ್ಥಳದ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.


