
ಪ್ರಗತಿವಾಹಿನಿ ಸುದ್ದಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಪ್ರಕರಣದ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು ಇದೀಗ ತಾಂತ್ರಿಕ ಸಾಕ್ಷ್ಯಗಳನ್ನು ಕಲೆಹಾಕುತ್ತಿದ್ದಾರೆ.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ದೆಹಲಿ ನಿವಾಸದ ಬಳಿ ಸ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದ ಮೊಬೈಲ್ ಅನ್ನು ಆರೋಪಿಗಳು ಪರಸ್ಪರ ವಿನಿಮಯ ಮಾಡಿಕೊಂಡಿದ್ದರು ಎಂದು ಆರೋಪಿ ರಿತೇಶ್ ಪಾಂಡೆ ನೀಡಿದ ಮಾಹಿತಿ ಆಧರಿಸಿ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಇತ್ತೀಚೆಗೆ ಮಾಧ್ಯಮಗಳಿಗೆ ತಿಳಿಸಿದ್ದರು. ಈ ವಿಚಾರ ಪ್ರಕರಣದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು.
ಇದೀಗ ವಿಚಾರಣೆಗೆ ಹಾಜರಾಗಿರುವ ಕುಮಾರಸ್ವಾಮಿ ಅವರ ಪಿಆರ್ಒ ಪ್ರಜ್ವಲ್ ಪ್ರಸಾದ್, ವಿಡಿಯೋ ಮತ್ತು ಈ ಪ್ರಕರಣದ ಹಲವು ಪ್ರಮುಖ ವಿಚಾರಗಳ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳುತ್ತಿರುವುದಾಗಿ ತಿಳಿದುಬಂದಿದೆ. ಹೀಗಾಗಿ, ಪ್ರಜ್ವಲ್ ಹೇಳಿಕೆಗಳನ್ನಷ್ಟೇ ಅವಲಂಬಿಸದೆ ತಾಂತ್ರಿಕ ಸಾಕ್ಷ್ಯಗಳ ಮೂಲಕ ಸತ್ಯಾಂಶ ಹೊರತೆಗೆದಿಡಲು ಸಿಸಿಬಿ ಯೋಜನೆ ರೂಪಿಸಿದೆ.
ಸಿಸಿಬಿ ವಿಚಾರಣೆಗೆ ಹಾಜರಾಗಿರುವ ಪ್ರಜ್ವಲ್ ಪ್ರಸಾದ್, ಸ್ಟಿಂಗ್ ವಿಡಿಯೋ ಕುರಿತು ತನಗೆ ಮಾಹಿತಿ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಪ್ರಕರಣ ರಾಜಕೀಯ ಪ್ರೇರಿತವಾಗಿದ್ದು, ವಿಡಿಯೋವನ್ನು ತಾವು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದಾಗಿ ಅವರು ಹೇಳಿರುವ ಮಾಹಿತಿ ಇದೆ.
ಇನ್ನು ರಿತೇಶ್ ಪಾಂಡೆ ಎಂಬ ವ್ಯಕ್ತಿಯ ಬಗ್ಗೆ ತನಗೆ ಗೊತ್ತಿಲ್ಲ ಎಂದೂ ಪ್ರಜ್ವಲ್ ಪ್ರಸಾದ್ ವಿಚಾರಣೆ ವೇಳೆ ಹೇಳುತ್ತಿರುವುದಾಗಿ ತಿಳಿದುಬಂದಿದೆ. ಆದರೆ, ಪ್ರಕರಣದ ತನಿಖೆಯಲ್ಲಿ ಈ ಹೇಳಿಕೆಗಳು ಮತ್ತು ಈಗಾಗಲೇ ಲಭ್ಯವಾಗಿರುವ ಇತರ ಮಾಹಿತಿಗಳನ್ನು ತಾಂತ್ರಿಕ ಸಾಕ್ಷ್ಯಗಳ ಮೂಲಕ ಪರಿಶೀಲಿಸಲು ಪೊಲೀಸರು ಮುಂದಾಗಿದ್ದಾರೆ.
ಪ್ರಜ್ವಲ್ ಪ್ರಸಾದ್ ಮೊಬೈಲ್ ಅನ್ನು ವಶಪಡಿಸಿಕೊಂಡು ಅದರಲ್ಲಿರುವ ಮಾಹಿತಿಯನ್ನು ಮರುಪಡೆಯಲು ತಾಂತ್ರಿಕ ಪರಿಶೀಲನೆಗೆ ಕಳುಹಿಸುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರಕರಣಕ್ಕೆ ಸಂಬಂಧಿಸಿದ ಸಂಪರ್ಕಗಳು, ಸಂವಹನ ಮತ್ತು ಇತರ ಡಿಜಿಟಲ್ ಮಾಹಿತಿಗಳನ್ನು ಪರಿಶೀಲಿಸುವ ಮೂಲಕ ತನಿಖೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಿಸಿಬಿ ಸಿದ್ಧತೆ ನಡೆಸುತ್ತಿದೆ.
ಈಗಾಗಲೇ ಪ್ರಕರಣದ ಆರೋಪಿಗಳ ಕೆಲವು ಮೊಬೈಲ್ಗಳನ್ನು ಸಿಸಿಬಿ ವಶಪಡಿಸಿಕೊಂಡಿದ್ದು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ಎಸ್ಎಲ್) ಕಳುಹಿಸಲಾಗಿದೆ. ಎಫ್ಎಸ್ಎಲ್ ವರದಿಯನ್ನು ಆದಷ್ಟು ಶೀಘ್ರ ಪಡೆಯುವಂತೆ ತನಿಖಾಧಿಕಾರಿಗಳಿಗೆ ಸೂಚಿಸಲಾಗಿದೆ.
ಮೊಬೈಲ್ ಖರೀದಿ ಸುಳಿವು ಪತ್ತೆ:
ಆರೋಪಿ ರಿತೇಶ್ ಪಾಂಡೆ ದೆಹಲಿಯಲ್ಲಿ ಮೊಬೈಲ್ ಖರೀದಿಸಿದ್ದ ವಿಚಾರಕ್ಕೆ ಸಂಬಂಧಿಸಿದ ಮಹತ್ವದ ಮಾಹಿತಿ ಸಿಸಿಬಿಗೆ ದೊರೆತಿದೆ. ಮೊಬೈಲ್ ಖರೀದಿಸಿದ ಅಂಗಡಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಈಗಾಗಲೇ ಸಂಗ್ರಹಿಸಿದ್ದು, ಖರೀದಿಗೆ ಸಂಬಂಧಿಸಿದ ಬಿಲ್ನ್ನೂ ವಶಪಡಿಸಿಕೊಂಡಿದ್ದಾರೆ.
ಇದರ ಜೊತೆಗೆ, ಮೊಬೈಲ್ ಅಂಗಡಿಯ ಅಕ್ಕಪಕ್ಕದಲ್ಲಿರುವ ಅಂಗಡಿಗಳ ಸಿಸಿಟಿವಿ ದೃಶ್ಯಾವಳಿಗಳನ್ನೂ ಸಂಗ್ರಹಿಸುವ ಮೂಲಕ ತನಿಖೆಗೆ ಪೂರಕವಾದ ಮಾಹಿತಿ ಕಲೆಹಾಕಲಾಗುತ್ತಿದೆ. ಈ ತಾಂತ್ರಿಕ ಮತ್ತು ದೃಶ್ಯ ಸಾಕ್ಷ್ಯಗಳ ಆಧಾರದಲ್ಲಿ ಮುಂದಿನ ತನಿಖೆಯ ನಡೆಸಲಿದ್ದಾರೆ.



