Election NewsLatestWorld

*ಬಾಹ್ಯಾಕಾಶದಿಂದಲೇ ವೋಟ್‌ ಹಾಕಿದ ನಾಸಾ ಗಗನಯಾತ್ರಿ*: ವಿಡಿಯೋ ನೋಡಿ*

ಪ್ರಗತಿವಾಹಿನಿ ಸುದ್ದಿ: ಅಮೆರಿಕಾದಲ್ಲಿ ನಡೆಯುತ್ತಿರುವ ಬಹುನಿರೀಕ್ಷಿತ ಮಧ್ಯಂತರ ಚುನಾವಣೆಯಲ್ಲಿ ಭೂಮಿಯಿಂದ ನೂರಾರು ಕಿಲೋಮೀಟರ್ ಎತ್ತರದಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ 3 US ಗಗನಯಾತ್ರಿಗಳು ಬಾಹ್ಯಾಕಾಶದಿಂದಲೇ ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ.

ಸ್ಪೇಸ್‌ ಸ್ಟೇಷನ್‌ನಲ್ಲಿದ್ದುಕೊಂಡೆ ಎಲೆಕ್ಟ್ರಾನಿಕ್ ಬ್ಯಾಲಟ್ ಪೇಪರ್ ಮೂಲಕ ತಾವು ವೋಟ್‌ ಮಾಡಿದ ಕ್ಷಣದ ವಿಡಿಯೋವನ್ನು ನಾಸಾ ವಿಜ್ಞಾನಿ ಅನಿಲ್ ಮೆನನ್ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಯೆಸ್‌ ನೀವು ಬಾಹ್ಯಾಕಾಶದಿಂದಲೂ ಮತ ಚಲಾಯಿಸಬಹುದು ಎಂದು ಬರೆದುಕೊಂಡಿದ್ದಾರೆ.

ಸದ್ಯ ಈ ಮೂಲಕ 1997ರಿಂದ ಬಾಹ್ಯಾಕಾಶದಿಂದ ಮತಚಲಾವಣೆ ಮಾಡಿದ ಗಗನಯಾತ್ರಿಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ. ಇವರೊಂದಿಗೆ ಗಗನಯಾತ್ರಿಗಳಾದ ಜೆಸ್ಸಿಕಾ ವ್ಯಾಟ್ಕಿನ್ಸ್ ಹಾಗೂ ಲ್ಯೂಕ್ ಡೆಲಾನಿ ಸಹ ಮತ ಚಲಾಯಿಸಿದ್ದಾರೆ.

ಅಮೆರಿಕಾ ಮಧ್ಯಂತರ ಚುನಾವಣೆಯ ನಡುವೆ ಭೂಮಿಯಿಂದ ನೂರಾರು ಕಿ.ಮೀ ದೂರದಲ್ಲಿ(ಸುಮಾರು 400 ಕಿ.ಮೀಗೂ ಅಧಿಕ ಅಂತರ) ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣನಲ್ಲಿ (ISS) ಅಮೆರಿಕಾದ 3 ವಿಜ್ಞಾನಿಗಳು ಇದ್ದಾರೆ. ಹೀಗೆ ಐಎಸ್ ಎಸ್ ನಲ್ಲಿ ಕಕ್ಷೆಯ ಪ್ರಯೋಗಾಲಯದಲ್ಲಿದ್ದಾಗಲೂ ಚುನಾವಣಾ ಸಮಯಕ್ಕೆ ಅಲರ್ಟ್‌ ಆದ ಈ ಮೂವರು ಬಾಹ್ಯಾಕಾಶದಿಂದಲೇ ಎಲೆಕ್ಟ್ರಾನಿಕ್‌ ಬ್ಯಾಲೆಟ್‌ ಪೇಪರ್‌ ಮೂಲಕ ವೋಟ್‌ ಮಾಡಿದ್ದು, ನಾಸಾ ವಿಜ್ಞಾನಿಯಾಗಿರುವ ಭಾರತೀಯ ಮೂಲದ ಅಮೆರಿಕನ್‌ ನಾಗರಿಕ ಅನಿಲ್‌ ಮೆನನ್‌ ಸೇರಿ ಮೂವರು ಸ್ಪೇಸ್‌ನಿಂದ ತಾವು ಮತಚಲಾಯಿಸುವ ಕ್ಷಣದ ವಿಡಿಯೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

’ನೀವು ಬಾಹ್ಯಾಕಾಶದಿಂದಲೂ ಮತ ಚಲಾಯಿಸಬಹುದು! ಅಮೆರಿಕಾದ ಮೂವರು ಸಿಬ್ಬಂದಿಗೂ ಬಾಹ್ಯಾಕಾಶ ನಿಲ್ದಾಣದಿಂದ ಮತ ಚಲಾಯಿಸುವ ಸವಲತ್ತು ಇದ್ದು, ನಾವು ಎಲೆಕ್ಟ್ರಾನಿಕ್ ಮತಪತ್ರವನ್ನು ಭರ್ತಿ ಮಾಡಿ ಚುನಾವಣಾ ಅಧಿಕಾರಿಗಳಿಗೆ ಸುರಕ್ಷಿತವಾಗಿ ಕಳುಹಿಸಿದ್ದೇವೆ’ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

ವಿಡಿಯೋದಲ್ಲಿ ಅನಿಲ್‌ ಮೆನನ್‌ ತಾವು ISSನಲ್ಲಿರುವ ತಮ್ಮ ಕಂಪ್ಯೂಟರ್‌ ಅನ್ನು ಬಳಸಿಕೊಂಡು ಮತಚಲಾಯಿಸಿದ ಬಳಿಕ ಹೇಗೆ ಟೆಕ್ಸಾಸ್‌ನ ಹ್ಯಾರಿಸ್ ಕೌಂಟಿಯಲ್ಲಿ ಚುನಾವಣಾ ಅಧಿಕಾರಿಗಳಿಗೆ ಈ ಎಲೆಕ್ಟ್ರಾನಿಕ್ ಮತಪತ್ರವನ್ನು ಸಲ್ಲಿಸುತ್ತಾರೆ ಎಂಬುದನ್ನು ಪ್ರದರ್ಶಿಸಿದ್ದಾರೆ. ಈ ವಿಡಿಯೋದಲ್ಲಿ ISSನ ಸ್ಲೀಪಿಂಗ್ ಕಂಪಾರ್ಟ್‌ಮೆಂಟ್ ಅನ್ನು ಮತಗಟ್ಟೆಯನ್ನಾಗಿ ಮಾಡಲಾಗಿತ್ತು.

ಅನಿಲ್‌ ಮೆನನ್ ಈ ವರ್ಷದ ಜುಲೈ 14 ರಂದು ರಷ್ಯಾದ ಸೋಯುಜ್ ಬಾಹ್ಯಾಕಾಶ ನೌಕೆಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಬಂದಿಳಿದಿದ್ದಾರೆ. ಇದಾದ ಬಳಿಕ ಅ.1 ರಂದು ಸ್ಪೇಸ್‌ಎಕ್ಸ್ ಕಾರ್ಯಾಚರಣೆಯಲ್ಲಿ ವ್ಯಾಟ್ಕಿನ್ಸ್ ಮತ್ತು ಡೆಲಾನಿ ಸಹ ISS ಕಕ್ಷೆಯ ಪ್ರಯೋಗಾಲಯವನ್ನು ತಲುಪಿದ್ದಾರೆ.

https://www.instagram.com/reel/DfSqBnjjc0h

Related Articles

Back to top button