*ರೈಲ್ವೆ ಅಂಡರ್ ಬ್ರಿಡ್ಜ್ ಕಾಮಗಾರಿ ವೇಳೆ ಮಣ್ಣು ಕುಸಿತ*: *ತಾಂತ್ರಿಕ ಸಿಬ್ಬಂದಿ ಸಾವು*

ರೈಲ್ವೆ ಅಂಡರ್ ಬ್ರಿಡ್ಜ್ ಕಾಮಗಾರಿ ವೇಳೆ ಮಣ್ಣು ಕುಸಿದು ಬಿದ್ದ ಪರಿಣಾಮ ರೈಲ್ವೆ ಇಲಾಖೆಯ ತಾಂತ್ರಿಕ ಉದ್ಯೋಗಿಯೋರ್ವರು ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ನಡೆದಿದೆ. ಇದೇ ವೇಳೆ ಓರ್ವ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲಿ ತೆಗೆದು ಹಾಕಿದ್ದ ಮಣ್ಣು ಇದ್ದಕ್ಕಿದಂತೆ ಕುಸಿದಿದೆ. ಅವಶೇಷಗಳ ಅಡಿ ಸಿಲುಕಿ ರೈಲ್ವೆ ಇಲಾಖೆಯ ತಾಂತ್ರಿಕ ಸಿಬ್ಬಂದಿ ಮೃತಪಟ್ಟಿದ್ದಾರೆ.
ಮೃತರಲ್ಲೀ ಓರ್ವ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಜಾಲವಾಡಗಿ ಗ್ರಾಮದ ನಿವಾಸಿ ಮಹೇಶ ಶೇಖಪ್ಪ ತಳವಾರ (33) ಎಂದು ತಿಳಿದುಬಂದಿದೆ.
ಸ್ಥಳದಲ್ಲಿದ್ದ ರೈಲ್ವೆ ಇಲಾಖೆಯ ಸೀನಿಯರ್ ಸೆಕ್ಷೆನ್ ಇಂಜಿನಿಯರ್ ಮಕ್ತುಂ ಹುಸೇನ್ ಮಹಮ್ಮದ್ ಹುಸೇನ್ ಮುಲ್ಲಾ (57) ಎಂಬವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಅಳ್ನಾವರ-ಅಂಬೇವಾಡಿ ಸೆಕ್ಷನ್ನ ಎಲ್ಸಿ ನಂ.11 ರಲ್ಲಿ ದಾಂಡೇಲಿ ತಾಲೂಕಿನ ಕರ್ಕಾ – ಬರ್ಚಿ ರೈಲ್ವೆ ಮಾರ್ಗದಲ್ಲಿ ಅಂಡರ್ ಬ್ರಿಡ್ಜ್ ಕಾಮಗಾರಿ ವೇಳೆ ಈ ದುರಂತ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಸಿಪಿಐ ಶಿವಾನಂದ ಅಂಬಿಗೇರ್ ಹಾಗೂ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




