
ಪ್ರಗತಿವಾಹಿನಿ ಸುದ್ದಿ: ವಿನ್ ಫಾಸ್ಟ್ ತನ್ನ ಜನಪ್ರಿಯ 7-ಸೀಟರ್ ಎಲೆಕ್ಟ್ರಿಕ್ ಕಾರು ‘VF MPV 7’ನ ಬೆಲೆಯಲ್ಲಿ ಭಾರಿ ಕಡಿತವನ್ನು ಪ್ರಕಟಿಸಿದೆ. ಈ ಮೂಲಕ ಇವಿ ವಾಹನ ಗ್ರಾಹಕರಿಗೆ ಬಂಪರ್ ಆಫರ್ ನೀಡಿದೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿಯೇ ಭಾರತದಲ್ಲಿ ವಾಹನ ಖರೀದಿದಾರರನ್ನು ಸೆಳೆಯಲು ಆಟೋಮೊಬೈಲ್ ಕಂಪನಿಗಳು ಭರ್ಜರಿ ಆಫರ್ಗಳನ್ನು ನೀಡುತ್ತಿವೆ. ಸುಮಾರು ಆರು ತಿಂಗಳ ಹಿಂದೆಯಷ್ಟೇ ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ಲಗ್ಗೆ ಇಟ್ಟಿದ್ದ ವಿಯೆಟ್ನಾಂನ ಇವಿ ದೈತ್ಯ ವಿನ್ ಫಾಸ್ಟ್ (VinFast) ತನ್ನ 7-ಸೀಟರ್ ಎಲೆಕ್ಟ್ರಿಕ್ ಮಲ್ಟಿ-ಪರ್ಪಸ್ ವೆಹಿಕಲ್ ‘MPV 7’ ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ.
ಈ ಕಾರನ್ನು ಆರಂಭದಲ್ಲಿ ₹24.49 ಲಕ್ಷ (Ex-showroom) ಬೆಲೆಯಲ್ಲಿ ಬಿಡುಗಡೆ ಮಾಡಿತ್ತು. ಆದರೆ ಇದೀಗ ಹಬ್ಬದ ಸೀಸನ್ ಪ್ರಯುಕ್ತ ಇದರ ಬೆಲೆಯನ್ನು ನೇರವಾಗಿ ₹20.39 ಲಕ್ಷಕ್ಕೆ ಇಳಿಸಿದೆ. ಈ ಮೂಲಕ ಬೆಲೆಯಲ್ಲಿ ₹4.1 ಲಕ್ಷದಷ್ಟು ಭಾರಿ ರಿಯಾಯಿತಿ ಸಿಕ್ಕಂತಾಗಿದೆ.
ಬೆಲೆ ಕಡಿಮೆಯಾಗಿದ್ದರೂ ಕಾರಿನ ಯಾವುದೇ ತಾಂತ್ರಿಕ ವೈಶಿಷ್ಟ್ಯ ಅಥವಾ ಫೀಚರ್ಸ್ಗಳಲ್ಲಿ ಕಂಪನಿ ಯಾವುದೇ ಬದಲಾವಣೆ ಮಾಡಿಲ್ಲ.
ಈ ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ 3 – ಸಾಲಿನ ಸೀಟಿಂಗ್ (Three rows of seating) ವ್ಯವಸ್ಥೆ ಹೊಂದಿರುವ ಇತರ ಎಲೆಕ್ಟ್ರಿಕ್ ಕಾರುಗಳಿಗೆ ಹೋಲಿಸಿದರೆ ವಿನ್ ಫಾಸ್ಟ್ VF MPV 7 ಬೆಲೆ ಕೊಂಚ ದುಬಾರಿಯಾಗಿತ್ತು. ಆದರೆ, ಈ ಹೊಸ ದರ ಕಡಿತದ ನಂತರ ಈ ಕಾರು ಸಾಮಾನ್ಯ ಗ್ರಾಹಕರಿಗೂ ಕೈಗೆಟುಕುವಂತಾಗಿದೆ. ವಿಶೇಷವೆಂದರೆ, ಭಾರತದಲ್ಲಿ ಈ ಮಾಡೆಲ್ ಕೇವಲ ಒಂದೇ ಒಂದು ಫುಲ್ಲಿ-ಲೋಡೆಡ್ (Fully-loaded) ಹೈ-ಎಂಡ್ ವೇರಿಯೆಂಟ್ನಲ್ಲಿ ಮಾತ್ರ ಮಾರಾಟವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಇದರ ಪ್ರತಿಸ್ಪರ್ಧಿ ಕಾರುಗಳ ಟಾಪ್-ಸ್ಪೆಕ್ (Top-spec) ಆವೃತ್ತಿಗಳಿಗೆ ಹೋಲಿಸಿದರೆ ವಿನ್ ಫಾಸ್ಟ್ ಈಗ ಬರೋಬ್ಬರಿ ₹9.76 ಲಕ್ಷದಷ್ಟು ಕಡಿಮೆ ಬೆಲೆಯಲ್ಲಿ ಲಭ್ಯವಿದೆ.
ವಿನ್ ಫಾಸ್ಟ್ VF MPV 7 ಎಂಜಿನ್ ಮತ್ತು ಬ್ಯಾಟರಿ ಸಾಮರ್ಥ್ಯ: ಈ ಅತ್ಯಾಧುನಿಕ ಎಲೆಕ್ಟ್ರಿಕ್ ಕಾರಿನಲ್ಲಿ ಶಕ್ತಿಶಾಲಿ 60.13 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ (Battery Pack) ಬಳಸಲಾಗಿದೆ. ಇದು ಕಾರಿನ ಮುಂಭಾಗದ ಆಕ್ಸಲ್ನಲ್ಲಿರುವ ಎಲೆಕ್ಟ್ರಿಕ್ ಮೋಟಾರ್ಗೆ ಪವರ್ ನೀಡುತ್ತದೆ. ಈ ಎಲೆಕ್ಟ್ರಿಕ್ ಪವರ್ಟ್ರೇನ್ ಬರೋಬ್ಬರಿ 201 bhp ಪವರ್ ಮತ್ತು 280 Nm ಗರಿಷ್ಠ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.



