*ಜಲಾಶಯದ ನೀರಿನ ಮಟ್ಟದಲ್ಲಿ ಭಾರಿ ಕುಸಿತ*: *10 ದಿನಗಳಲ್ಲಿ 6 ಅಡಿ ಇಳಿಕೆ, ರೈತರಲ್ಲಿ ಆತಂಕ*

ಪ್ರಗತಿವಾಹಿನಿ ಸುದ್ದಿ: ಮಳೆಯ ಕೊರತೆ ಹಾಗೂ ತಮಿಳುನಾಡಿಗೆ ನಿರಂತರವಾಗಿ ನೀರು ಬಿಡುಗಡೆ ಮಾಡುತ್ತಿರುವ ಪರಿಣಾಮ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಜಲಾಶಯದ ನೀರಿನ ಮಟ್ಟ ಗಣನೀಯವಾಗಿ ಕುಸಿಯುತ್ತಿದೆ.
ಕಳೆದ 10 ದಿನಗಳಲ್ಲೇ ಜಲಾಶಯದ ನೀರಿನ ಮಟ್ಟ 6 ಅಡಿ ಇಳಿಕೆಯಾಗಿದ್ದು, ಕಾವೇರಿ ಕಣಿವೆಯ ರೈತರು ಹಾಗೂ ಜನರಲ್ಲಿ ಆತಂಕ ಹೆಚ್ಚಾಗಿದೆ.
124.80 ಅಡಿ ಗರಿಷ್ಠ ಸಂಗ್ರಹ ಸಾಮರ್ಥ್ಯ ಹೊಂದಿರುವ ಕೆಆರ್ಎಸ್ ಜಲಾಶಯದಲ್ಲಿ 10 ದಿನಗಳ ಹಿಂದೆ 104 ಅಡಿ ನೀರು ಸಂಗ್ರಹವಾಗಿತ್ತು. ಆದರೆ, ಸತತ ನೀರು ಬಿಡುಗಡೆ ಹಿನ್ನೆಲೆಯಲ್ಲಿ ಇದೀಗ ನೀರಿನ ಮಟ್ಟ 98 ಅಡಿಗೆ ಕುಸಿದಿದೆ. ಸದ್ಯ ಜಲಾಶಯದಲ್ಲಿ 21.689 ಟಿಎಂಸಿ ನೀರು ಮಾತ್ರ ಲಭ್ಯವಿದೆ.
ಜಲಾಶಯದ ನೀರಿನ ಮಟ್ಟ ಕುಸಿಯುತ್ತಿರುವ ನಡುವೆಯೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚನೆ ನೀಡಿದೆ. ಈ ನಿರ್ಧಾರ ರಾಜ್ಯದ ರೈತರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಸದ್ಯ ಕೆಆರ್ಎಸ್ ಜಲಾಶಯಕ್ಕೆ ಕೇವಲ 608 ಕ್ಯೂಸೆಕ್ ನೀರು ಒಳಹರಿವಾಗುತ್ತಿದ್ದರೆ, 3,480 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಒಳಹರಿವಿಗಿಂತ ಹೊರಹರಿವು ಹಲವು ಪಟ್ಟು ಹೆಚ್ಚಾಗಿರುವುದರಿಂದ ಜಲಾಶಯದ ನೀರಿನ ಸಂಗ್ರಹ ವೇಗವಾಗಿ ಕ್ಷೀಣಿಸುತ್ತಿದೆ.
ಒಂದೆಡೆ ಮಳೆಯ ಕೊರತೆ, ಮತ್ತೊಂದೆಡೆ ತಮಿಳುನಾಡಿಗೆ ನೀರು ಹರಿಸುವ ಒತ್ತಡದಿಂದ ಕಾವೇರಿ ಕಣಿವೆಯಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುವ ಆತಂಕ ಎದುರಾಗಿದೆ. ಜಲಾಶಯದ ನೀರಿನ ಮಟ್ಟ ಇದೇ ರೀತಿ ಕುಸಿದರೆ ಬೇಸಿಗೆಯಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ.


