*ಬೆಂಗಳೂರಿಗೆ ಬಿಗ್ ಬೂಸ್ಟ್*: *ನಾಳೆ ಬಿಡಿಎ ಮಹತ್ವದ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲಿರುವ ಸಿಎಂ*; *ಮಹತ್ವದ ಘೋಷಣೆ ನಿರೀಕ್ಷೆ!*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರು ನಗರದ ಸಂಚಾರ ದಟ್ಟಣೆ ನಿವಾರಣೆ, ವ್ಯವಸ್ಥಿತ ನಗರೀಕರಣ ಹಾಗೂ ದಶಕಗಳಿಂದ ಬಾಕಿ ಉಳಿದಿರುವ ನಾಗರಿಕರ ನಿವೇಶನ ಮತ್ತು ವಸತಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಮಹತ್ವಾಕಾಂಕ್ಷೆಯ ಯೋಜನೆಗಳ ಸಮಗ್ರ ಪ್ರಗತಿ ಪರಿಶೀಲನೆ ನಡೆಸಿದ್ದಾರೆ.
ಜನಸಾಮಾನ್ಯರಿಗೆ ಅನುಕೂಲವಾಗುವ ಹಾಗೂ ಸಿಲಿಕಾನ್ ಸಿಟಿಯ ಮೂಲಸೌಕರ್ಯದ ಚಿತ್ರಣವನ್ನೇ ಬದಲಿಸಬಲ್ಲ ಪ್ರಮುಖ ಯೋಜನೆಗಳ ಕುರಿತು ಬಿಡಿಎ ಅಧಿಕಾರಿ ವರ್ಗದೊಂದಿಗೆ ಸುದೀರ್ಘ ಚರ್ಚೆ ನಡೆಸಲಿದ್ದು, ಸಭೆಯ ಬಳಿಕ ನಾಳೆ ನಡೆಯಲಿರುವ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿಗಳು ಮಹತ್ವದ ನಿರ್ಧಾರಗಳನ್ನು – ಯೋಜನೆಗಳನ್ನು ಪ್ರಕಟಿಸುವ ಸಾಧ್ಯತೆಯಿದೆ.
ಪ್ರಮುಖ ನಿರೀಕ್ಷೆಗಳು:
ನಿಯಮ 38(ಡಿ) ಅಡಿ ಮನೆಗಳ ಸಕ್ರಮ – ಶುಲ್ಕದಲ್ಲಿ ಶೇ. 50ರಷ್ಟು ಭಾರೀ ರಿಯಾಯಿತಿ:
ಬಿಡಿಎ ಭೂಸ್ವಾಧೀನಕ್ಕೊಳಪಟ್ಟ ಜಾಗಗಳಲ್ಲಿ 12 ವರ್ಷಗಳ ಹಿಂದೆ (10.07.2008ರ ಪೂರ್ವದಲ್ಲಿ) ನಿರ್ಮಿಸಲಾದ ಮನೆಗಳನ್ನು ಸಕ್ರಮಗೊಳಿಸಲು ಸರ್ಕಾರ ಈಗಾಗಲೇ ಅಧಿಸೂಚನೆ ಹೊರಡಿಸಿದೆ. ಇದೀಗ ನಾಗರಿಕರಿಗೆ ಭರ್ಜರಿ ನೆಮ್ಮದಿ ನೀಡುವ ಸಲುವಾಗಿ ಮಾರ್ಗಸೂಚಿ ಮೌಲ್ಯದ ದರವನ್ನು ಗಣನೀಯವಾಗಿ ಇಳಿಕೆ ಮಾಡಲಾಗಿದೆ:
20×30 ವರೆಗೆ: ಈ ಹಿಂದಿನ ಶೇ. 10ರ ಬದಲು ಈಗ ಕೇವಲ ಶೇ. 5.
20×30 ರಿಂದ 30×40 ವರೆಗೆ: ಶೇ. 25ರ ಬದಲು ಕೇವಲ ಶೇ. 12.5.
30×40 ರಿಂದ 40×60 ವರೆಗೆ: ಶೇ. 40ರ ಬದಲು ಶೇ. 20.
40×60 ರಿಂದ 50×80 ವರೆಗೆ: ಶೇ. 50ರ ಬದಲು ಶೇ. 25 ಮತ್ತು ದಂಡ ವಿಧಿಸುವ ಅಧಿಸೂಚನೆ ಚಾಲ್ತಿಯಲ್ಲಿದೆ. ಈ ಯೋಜನೆಯ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸಂಪೂರ್ಣ ಗಣಕೀಕೃತಗೊಳಿಸುವ ವ್ಯವಸ್ಥೆಗೆ ಮಾನ್ಯ ಮುಖ್ಯಮಂತ್ರಿಗಳು ಚಾಲನೆ ನೀಡುವ ಸಾಧ್ಯತೆ ಇದೆ.
ಒಟ್ಟಾರೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಾಳೆ ನಡೆಯಲಿರುವ ಪರಿಶೀಲನಾ ಸಭೆಯಲ್ಲಿ ಯೋಜನೆಗಳ ಪ್ರಸ್ತುತ ಸ್ಥಿತಿ, ಅನುಷ್ಠಾನದ ವೇಗ, ಭೂಸ್ವಾಧೀನದ ಪ್ರಗತಿ, ಆರ್ಥಿಕ ಹಾಗೂ ಆಡಳಿತಾತ್ಮಕ ಅಂಶಗಳು ಮತ್ತು ನಿಗದಿತ ಕಾಲಮಿತಿಯೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸುವ ಕುರಿತು ಅಧಿಕಾರಿಗಳಿಗೆ ಅಗತ್ಯ ಮಾರ್ಗದರ್ಶನ ನೀಡುವ ನಿರೀಕ್ಷೆಯಿದೆ. ಹಾಗೂ ಮಾನ್ಯ ಮುಖ್ಯಮಂತ್ರಿಗಳು ಬಿಡಿಎ ವತಿಯಿಂದ ಹೊಸ ಯೋಜನೆಗಳನ್ನು ಘೋಷಿಸುವ ಸಾಧ್ಯತೆ ಇದೆ.




